
ಬೆಂಗಳೂರು: ಏಪ್ರಿಲ್ 17 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಕುರಿತು ಚರ್ಚೆಯ ನಂತರವೇ ಮಾತನಾಡುತ್ತೇನೆ. ಅಲ್ಲಿಯವರೆಗೆ ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
'ಈ ಏಕೈಕ ವಿಷಯದ ಬಗ್ಗೆ ಚರ್ಚಿಸಲು ನಾವು ಏಪ್ರಿಲ್ 17 ರಂದು ಸಚಿವ ಸಂಪುಟ ಸಭೆ ಕರೆದಿದ್ದೇವೆ. ಅಲ್ಲಿ ನಾವು ಚರ್ಚಿಸುತ್ತೇವೆ. ಚರ್ಚೆಯ ನಂತರ, ನಾನು ಇದರ ಬಗ್ಗೆ ಮಾತನಾಡುತ್ತೇನೆ' ಎಂದು ಸಿದ್ದರಾಮಯ್ಯ ಹೇಳಿದರು.
ಭಾರತೀಯ ಸಂವಿಧಾನದ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ ಸಚಿವ ಸಂಪುಟವು ಏಪ್ರಿಲ್ 11 ರಂದು 'ಜಾತಿ ಗಣತಿ' ಎಂದು ಕರೆಯಲಾಗುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಂಗೀಕರಿಸಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್ ಕಾಂತರಾಜು ನೇತೃತ್ವದಲ್ಲಿ ಜಾತಿ ಗಣತಿ ವರದಿ ಸಿದ್ಧಪಡಿಸುವ ಕಾರ್ಯವನ್ನು ಆಯೋಗಕ್ಕೆ ವಹಿಸಲಾಗಿತ್ತು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿತು ಎಂಬ ಬಿಜೆಪಿಯ ಆರೋಪವನ್ನು ಸಿದ್ದರಾಮಯ್ಯ ಅವರು ಆಧಾರರಹಿತ ಎಂದರು.
ಅಂಬೇಡ್ಕರ್ ಅವರು ಪತ್ರ ಬರೆದು ತಮ್ಮ ಸೋಲಿಗೆ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ್ ಡಾಂಗೆ ಕಾರಣ ಎಂದು ಹೇಳಿದ್ದಾರೆ. ಬಿಜೆಪಿ ಮಹಾತ್ಮಾ ಗಾಂಧಿ, ಅಂಬೇಡ್ಕರ್ ಮತ್ತು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ತಮ್ಮವರನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
'ಅಂಬೇಡ್ಕರ್ ಅವರನ್ನು ವಿರೋಧಿಸಿದವರು ಮತ್ತು ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದವರು ಈಗ ಅವರನ್ನು ನಮ್ಮವರನ್ನಾಗಿಸಿಕೊಳ್ಳಳು ಪ್ರಯತ್ನಿಸುತ್ತಿದ್ದಾರೆ. ಭಾರತೀಯ ಸಂವಿಧಾನವನ್ನು ವಿರೋಧಿಸಿದ 'ಮನುವಾದಿಗಳು' ಈಗ ಅವರ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ' ಎಂದು ಸಿದ್ದರಾಮಯ್ಯ ಆರೋಪಿಸಿದರು.
Advertisement