News Headlines | ಹಿಂದೂ ಪ್ರವಾಸಿಗರ ಮೇಲೆ ಉಗ್ರ ದಾಳಿ: ಕನ್ನಡಿಗರು ಸೇರಿ 27ಕ್ಕೂ ಹೆಚ್ಚು ಸಾವು; IAF ಅಧಿಕಾರಿ ವಿರುದ್ಧ ಪ್ರಕರಣ ದಾಖಲು; Darshan ಜಾಮೀನು ಪ್ರಶ್ನಿಸಿ ಅರ್ಜಿ: ವಿಚಾರಣೆ ಮುಂದೂಡಿಕೆ!

News Headlines | ಹಿಂದೂ ಪ್ರವಾಸಿಗರ ಮೇಲೆ ಉಗ್ರ ದಾಳಿ: ಕನ್ನಡಿಗರು ಸೇರಿ 27ಕ್ಕೂ ಹೆಚ್ಚು ಸಾವು; IAF ಅಧಿಕಾರಿ ವಿರುದ್ಧ ಪ್ರಕರಣ ದಾಖಲು; Darshan ಜಾಮೀನು ಪ್ರಶ್ನಿಸಿ ಅರ್ಜಿ: ವಿಚಾರಣೆ ಮುಂದೂಡಿಕೆ!

1. ಹಿಂದೂ ಪ್ರವಾಸಿಗರ ಮೇಲೆ ಉಗ್ರ ದಾಳಿ: ಕನ್ನಡಿಗರು ಸೇರಿ 27ಕ್ಕೂ ಹೆಚ್ಚು ಸಾವು

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ದುಷ್ಕೃತ್ಯ ನಡೆಸಿದ್ದು ಯಾವ ಧರ್ಮ ಅಂತ ಕೇಳಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿಯ ಮೂಲಕ ಕುಕೃತ್ಯ ಎಸಗಿದ್ದಾರೆ. ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಏಳಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಉಗ್ರರಿಂದ ದಾಳಿಯಾಗುತ್ತಿದ್ದಂತೆ ಭಾರತೀಯ ಸೇನೆ ಪ್ರದೇಶವನ್ನು ಸುತ್ತುವರೆದಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ನಂತರ ತುರ್ತು ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಉಗ್ರರ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.

2. IAF ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಪೊಲೀಸರು ಇದೀಗ IAF ವಿಂಗ್ ಕಮಾಂಡರ್‌ ಬೋಸ್ ವಿರುದ್ಧವೇ ಹತ್ಯಾ ಪ್ರಯತ್ನ ಕೇಸ್ ದಾಖಲಿಸಿದ್ದಾರೆ. ನಿನ್ನೆ ತನ್ನ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ವಿಂಗ್ ಕಮಾಂಡರ್ ಶೀಲಾಧಿತ್ಯ ಬೋಸ್ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೈಕ್ ಸವಾರ ವಿನಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದಾದ ನಂತರ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು ಶೀಲಾಧಿತ್ಯನೇ ವಿನಯ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಬಯಲಾಗಿತ್ತು. ಮತ್ತೊಂದೆಡೆ ಘಟನೆ ಸಂಬಂಧಿಸಿದಂತೆ ವಿಂಗ್ ಕಮಾಂಡರ್ ಆಗಲಿ ಯಾರೇ ಆಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಭಾರತೀಯ ವಾಯುಪಡೆ ತಿಳಿಸಿದೆ.

3. RickyRai ಮೇಲೆ ಗುಂಡಿನ ದಾಳಿ: ಮಲತಾಯಿ ಅನುರಾಧಗೆ ಹೈಕೋರ್ಟ್ ರಿಲೀಫ್

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಇಂದು ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಗೆ ರಿಲೀಫ್ ನೀಡಿದೆ. ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠವು, ಅನುರಾಧ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅನುರಾಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಏಪ್ರಿಲ್ 18ರ ಮಧ್ಯರಾತ್ರಿ ಬಿಡದಿಯಲ್ಲಿರುವ ರಿಕ್ಕಿ ರೈ ಅವರ ಫಾರ್ಮ್‌ಹೌಸ್‌ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆಯಲ್ಲಿ ಅನುರಾಧ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ.

4. Darshan ಜಾಮೀನು ಪ್ರಶ್ನಿಸಿ ಅರ್ಜಿ: ವಿಚಾರಣೆ ಮುಂದೂಡಿಕೆ

ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಗೆ ಸೇರಿದಂತೆ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ. ಹೀಗಾಗಿ ದರ್ಶನ್‌ ತೂಗುದೀಪಗೆ 21 ದಿನ ರಿಲೀಫ್‌ ಸಿಕ್ಕಿದೆ. ಬೆಂಗಳೂರು ನಗರ ಪೊಲೀಸರು ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮಹದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.

5. ಮಾಜಿ DGPಓಂ ಪ್ರಕಾಶ್ ಹತ್ಯೆ ಪ್ರಕರಣದ ತನಿಖೆ ಸಿಸಿಬಿ

ಮಾಜಿ DGPಓಂ ಪ್ರಕಾಶ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಸಿಬಿ ವರ್ಗಾಯಿಸಿದೆ. ಹತ್ಯೆ ಹಿಂದಿನ ಉದ್ದೇಶ ಮತ್ತು ಇತರ ವಿವರಗಳನ್ನು ಸಿಸಿಬಿ ತನಿಖೆ ನಡೆಸುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಗೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಲ್ಲವಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com