
ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಾರಿಡಾರ್ 2 ಮತ್ತು 4 ರ ಒಪ್ಪಂದವನ್ನು ಎಲ್&ಟಿ ರದ್ದುಗೊಳಿಸಿದ್ದು, ಯೋಜನೆಯನ್ನು ಕಾರ್ಯಗತಗೊಳಿಸಲು ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (K-RIDE) ಯಾವುದೇ ತಕರಾರು ಇಲ್ಲದ ಭೂಮಿಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ.
ಎಲ್ & ಟಿ ಒಪ್ಪಂದವನ್ನು ರದ್ದುಗೊಳಿಸಿರುವುದು ಈಗಾಗಲೇ ವಿಳಂಬವಾಗಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತಷ್ಟು ವಿಳಂಬವಾಗಲಿದೆ. ಈ ಯೋಜನೆ ಆರಂಭಗೊಳ್ಳಲು ಇದೀಗ ಮತ್ತೆ ಮರು-ಟೆಂಡರ್ ಕರೆಯುವ ಅಗತ್ಯವಿದೆ.
K-RIDE ನ ವ್ಯವಸ್ಥಾಪಕ ನಿರ್ದೇಶಕರಿಗೆ ಎಲ್&ಟಿ ಬರೆದ ಪತ್ರವು ಟಿಎನ್ಐಇಗೆ ಲಭ್ಯವಾಗಿದ್ದು, ಹಲವು ಬಾರಿ ನೀಡಿದ ಭರವಸೆಗಳ ಹೊರತಾಗಿಯೂ, 2022ರ ಆಗಸ್ಟ್‌ನಲ್ಲಿ ಒಪ್ಪಂದ ಮಾಡಿಕೊಂಡಾಗಿನಿಂದ, K-RIDE ಕಾನೂನು ಅಥವಾ ಯಾವುದೇ ಭೌತಿಕ ಅಡೆತಡೆಗಳಿಲ್ಲದೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯಲ್ಲಿ ಕೇವಲ ಶೇ 8.28 ರಷ್ಟನ್ನು ಮಾತ್ರ ಒದಗಿಸಿದೆ. ಇದು ನಿಷ್ಕ್ರೀಯ ಯಂತ್ರೋಪಕರಣಗಳು, ಬೃಹತ್ ವೆಚ್ಚದ ಮಿತಿಮೀರಿದ ಏರಿಕೆಗೆ ಕಾರಣವಾಯಿತು ಮತ್ತು ಕೆಲಸ ಪೂರ್ಣಗೊಳಿಸಲು ನೀಡಿದ್ದ ನಿಗಧಿತ ಸಮಯಕ್ಕೆ ಬದ್ಧವಾಗಿರಲು ಅಸಾಧ್ಯವಾಯಿತು ಎಂದು L&T ಹೇಳಿದೆ.
ಒಪ್ಪಂದವನ್ನು ಕೊನೆಗೊಳಿಸಿದ ನಂತರ, ಎಲ್ & ಟಿ ಅಧಿಕೃತವಾಗಿ ಮುಕ್ತಾಯ ವರದಿಯನ್ನು (closure report) ಸಲ್ಲಿಸಿತು ಮತ್ತು ಜುಲೈ 29 ರಂದು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದಲ್ಲಿ ಪ್ರಕರಣ ಹೂಡಿತು. ಆಗ ನ್ಯಾಯಾಲಯವು K-RIDE ಎಲ್&ಟಿಯ ಬ್ಯಾಂಕ್ ಗ್ಯಾರಂಟಿಗಳನ್ನು ಬಳಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿತು. ಸಾಕಷ್ಟು ಭೂಮಿ ಲಭ್ಯವಿಲ್ಲದೆ, ಯೋಜನೆಯನ್ನು ಮುಂದುವರಿಸುವುದು ಅಸಾಧ್ಯ ಎಂದು ಎಲ್&ಟಿ ವಾದಿಸಿತು.
ಪತ್ರದಲ್ಲಿ ಉಲ್ಲೇಖಿಸಿರುವಂತೆ ಎಲ್&ಟಿ ಕಂಪನಿಯು ಕಾರಿಡಾರ್ 2ಕ್ಕೆ ಸರಿಸುಮಾರು 500 ಕೋಟಿ ರೂ.ಗಳು ಮತ್ತು ಕಾರಿಡಾರ್ 4 ಕ್ಕೆ ಸುಮಾರು 150 ಕೋಟಿ ರೂ.ಗಳ ಪರಿಹಾರವನ್ನು ಕೋರಿದೆ ಎಂದು ತಿಳಿದುಬಂದಿದೆ.
ಒಪ್ಪಂದವನ್ನು ರದ್ದುಗೊಳಿಸಿರುವುದು ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ತೀವ್ರ ಹೊಡೆತ ಬಿದ್ದಂತಾಗಿದ್ದು, 2020ರ ಅಕ್ಟೋಬರ್‌ನಲ್ಲಿ ಯೋಜನೆ ಮಂಜೂರಾದಾಗಿನಿಂದಲೂ ಹಲವಾರು ವಿಳಂಬಗಳನ್ನು ಎದುರಿಸುತ್ತಿದೆ. ಮಂಜೂರಾದ ಯೋಜನೆಯು ಆರು ವರ್ಷಗಳಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಿತ್ತು. ಇದೀಗ, ಯೋಜನೆಯಿಂದ ಎಲ್&ಟಿ ಹೊರನಡೆದ ಕಾರಣ, ಕೆ-ರೈಡ್ ಈಗ ಕಾರಿಡಾರ್ 2 ಮತ್ತು 4 ಕ್ಕೆ ಹೊಸ ಟೆಂಡರ್‌ಗಳನ್ನು ಕರೆಯಬೇಕಾಗುತ್ತದೆ. ಮೂಲಗಳ ಪ್ರಕಾರ, ಕೆಲಸ ಪುನರಾರಂಭಗೊಳ್ಳಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ.
ಈ ಬೆಳವಣಿಗೆಯಿಂದಾಗಿ ಈ ಯೋಜನೆಯು ಅದರ ಮೂಲ ಗಡುವನ್ನು ಮೀರುವ ಸಾಧ್ಯತೆಯಿದೆ. ಮರು-ಟೆಂಡರ್ ಮಾಡುವುದರಿಂದ ಅನುಷ್ಠಾನ ವಿಳಂಬವಾಗುವುದಲ್ಲದೆ, ಯೋಜನೆಯ ವೆಚ್ಚವೂ ಗಣನೀಯವಾಗಿ ಹೆಚ್ಚಾಗಬಹುದು ಎಂದು ಉದ್ಯಮ ತಜ್ಞರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕರು ಲಭ್ಯವಾಗಿಲ್ಲ.
Advertisement