
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ರೈಲ್ವೆ ಸಚಿವಾಲಯ ಸಂಪೂರ್ಣ ಹಣಕಾಸು ನೆರವು ನೀಡಲಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದರು.
ಶನಿವಾರ ಸಚಿವ ಮುನಿಯಪ ಸಂಸದರಾದ ಡಾ.ಕೆ. ಸುಧಾಕರ್, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಡಾ.ಸಿ.ಎನ್. ಮಂಜುನಾಥ್ ಜತೆಗೂಡಿ ಹೊರ ವರ್ತುಲ ರೈಲ್ವೆ ಯೋಜನೆಯ ಪರಿಶೀಲನಾ ಸಭೆ ಕೈಗೊಂಡ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ರೈಲ್ವೆ ಸಚಿವಾಲಯ ಸಂಪೂರ್ಣ ಹಣಕಾಸು ನೆರವು ನೀಡಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂಟು ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ಮೂಲಕ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಸರಕು ಮತ್ತು ಪ್ರಯಾಣಿಕ ರೈಲುಗಳನ್ನು ಸೇರಿಸಲು ರೈಲು ಸಂಪರ್ಕವನ್ನು ಯೋಜಿಸಲಾಗಿದೆ. ವಿವರವಾದ ಯೋಜನಾ ವರದಿ (ಡಿಪಿಆರ್) ಶೀಘ್ರದಲ್ಲೇ ಸಿದ್ಧವಾಗಲಿದೆ. ಪ್ರಸ್ತಾವನೆಯಲ್ಲಿ ಬೆಂಗಳೂರು, ದೇವನಹಳ್ಳಿ ಮತ್ತು ಯಲಹಂಕ ನಡುವಿನ ಮೆಗಾ ಕೋಚಿಂಗ್ ಟರ್ಮಿನಲ್ ಸೇರಿದೆ ಎಂದು ಹೇಳಿದರು.
ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಬೆಂಗಳೂರು ವರ್ತುಲ ರೈಲ್ವೆ (287ಕಿ. ಮೀ.) ಯೋಜನೆ ಅನುಷ್ಠಾನಕ್ಕೆ 2,500 ಎಕರೆ ಭೂಸ್ವಾಧೀನ ಆಗಬೇಕಿದ್ದು, ವಶಕ್ಕೆ ಪಡೆವ ಭೂಮಿಗೆ ರೈಲ್ವೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು. ವರ್ತುಲ ರೈಲ್ವೆ ಯೋಜನೆ ಸಂಬಂಧ ಸರ್ವೆ ನಡೆಸಲಾಗಿದ್ದು, ಕೆಲ ನ್ಯೂನತೆ ಹಾಗೂ ಸವಾಲಿನ ಬಗ್ಗೆ ಸಂಸದರು ತಿಳಿಸಿದ್ದಾರೆ. ಅವನ್ನು ಸರಿಪಡಿಸಿ ವಿಸ್ತ್ರತ ಯೋಜನಾ ವರದಿ ರೂಪಿಸಲಾಗುವುದು. ಮುಖ್ಯವಾಗಿ ವರ್ತುಲ ರೈಲು ಯೋಜನೆಗೆ ಸಾಧ್ಯವಿರುವೆಡೆ ಉಪನಗರ ರೈಲನ್ನು ಜೋಡಣೆ ಮಾಡುವ ಜತೆಗೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಂಪರ್ಕಿಸುವಂತೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ವರ್ತುಲ ರೈಲು ಯೋಜನೆಯಲ್ಲಿ ಪ್ರಮಖವಾಗಿ ನಿಡವಂದ-ದೊಡ್ಡಬಳ್ಳಾಪುರ- ದೇವನಹಳ್ಳಿ, ಮಾಲೂರು- ಆನೇಕಲ್ - -ಹೆಜ್ಜಾಲ, ಸೋಲೂರು-ನಿಡವಂದ ಹೀಗೆ ಮೂರು ಹಂತದಲ್ಲಿ ಸಾಗಲಿದೆ. ಹಲವೆಡೆ ರೈಲ್ವೆ ನಿಲ್ದಾಣಗಳು ನಿರ್ಮಾಣ ಆಗಬೇಕಿದೆ. ಇದಕ್ಕಾಗಿ ಸರ್ವೆ ನಡೆಸಲಾಗಿದ್ದು, 2500 ಎಕರೆ ಭೂಸ್ವಾಧೀನ ಆಗಬೇಕಾಗುತ್ತದೆ.
ಸಾಧ್ಯವಾದಷ್ಟು ತೊಂದರೆ ತಪ್ಪಿಸಿ ರೈತರು, ಕೈಗಾರಿಕೆ ಭೂಮಿ ಪಡೆಯಲಾಗುವುದು. ಯೋಜನೆ ಅನುಷ್ಠಾನ ಹೊಣೆ ಹೊತ್ತಿರುವ ರೈಲ್ವೆ ಇಲಾಖೆ ನೂರಕ್ಕೆ ನೂರರಷ್ಟು ಪರಿಹಾರ ನೀಡಲಿದೆ. ಭೂಸ್ವಾಧೀನಕ್ಕಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರು, ಭೂಸ್ವಾದೀನ ಅಧಿಕಾರಿ ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗುವುದು. ಕೆಐಎಡಿಬಿ, ಕೆ-ರೈಡ್, ಬಿಬಿಎಂಪಿ, ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತ ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಸಮಿತಿ ಒಳಗೊಳ್ಳಲಿದೆ. ಪರಿಹಾರಕ್ಕಾಗಿ ರೈಲ್ವೆ ಇಲಾಖೆ, ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನುಸರಿಸಿ ಎಂದು ವಿವರಿಸಿದರು.
ಜತೆಗೆ ಬೆಂಗಳೂರು, ದೇವನಹಳ್ಳಿ ಹಾಗೂ ಯಲಹಂಕ ನಡುವೆ ಮಾಡಲು ಮೆಗಾ ಕೋಚಿಂಗ್ ಟರ್ಮಿನಲ್ ಮಾಡಲು ಡಿಪಿಆರ್ ಮಾಡಿಕೊಳ್ಳಲಾಗುವುದು. ಇದಕ್ಕೆ ತಗಲುವ ಅನುದಾನದ ಬಗ್ಗೆ ಶೀಘ್ರ ತೀರ್ಮಾನ ಆಗಲಿದೆ. ನಗರದಲ್ಲಿ ಹೊಸ ಐಟಿ ಸಿಟಿಗಳು ತಲೆ ಎತ್ತಲಿದೆ. ನಗರದಲ್ಲಿ ಮೆಟ್ರೋ, ಉಪನಗರ ರೈಲು ಯೋಜನೆ ಜತೆಗೆ ವರ್ತುಲ ರೈಲು ಯೋಜನೆಯೂ ಅಗತ್ಯವಿದೆ. ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರ ಅನುಕೂಲ ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯ ಸರ್ಕಾರದ ಪಾಲುದಾರಿಕೆಯೂ ಇರುವುದರಿಂದ ಉಪನಗರ ರೈಲು ಯೋಜನೆ ಕುಂಠಿತವಾಗಿದೆ. ಸದ್ಯ ಐಎಎಸ್ ಅಧಿಕಾರಿ ಎಂಡಿ ಸ್ಥಾನದಲ್ಲಿದ್ದು, ಯಾವ ಕೆಲಸವೂ ಆಗುತ್ತಿರಲಿಲ್ಲ. ಇದೀಗ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೂಡ ಹೊಸ ಎಂಡಿ ನೇಮಕಕ್ಕೆ ಸಮ್ಮತಿಸಿದ್ದು, ರೈಲ್ವೆಯಿಂದ ಒಂದು ತಿಂಗಳ ಒಳಗಾಗಿ ಹಿರಿಯ ಅನುಭವಿ ತಾಂತ್ರಿಕ ಪರಿಣತ ವ್ಯವಸ್ಥಾಪಕ ನಿರ್ದೇಶಕರು ನೇಮಕ ಆಗಲಿದ್ದಾರೆ. ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿ ಚುರುಕುಗೊಳಿಸಲಾಗುವುದು ಎಂದು ಹೇಳಿದರು.
Advertisement