
ಬೆಂಗಳೂರು: ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ರೈಲುಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಸಹ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಸಕಾಲಿಕ ಸಹಾಯದಿಂದ ಪ್ಲಾಟ್‌ಫಾರ್ಮ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ರೈಲು ಸಂಖ್ಯೆ 12836 SMVT ಬೆಂಗಳೂರು-ಹಟಿಯಾ ಎಕ್ಸ್‌ಪ್ರೆಸ್‌ನಲ್ಲಿ ಹಟಿಯಾಗೆ ತೆರಳುತ್ತಿದ್ದ 23 ವರ್ಷದ ಅರ್ಚನಾ ಕುಮಾರಿ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಈ ವೇಳೆ ರೈಲು ತಂಡದ ಭಾಗವಾಗಿ ಕರ್ತವ್ಯದಲ್ಲಿದ್ದ ಆರ್‌ವಿ ಸುರೇಶ್ ಬಾಬು ಅವರು ವೈದ್ಯಕೀಯ ಸಹಾಯಕ್ಕಾಗಿ ಕಮರ್ಷಿಯಲ್ ಕಂಟ್ರೋಲ್ ಗೆ ತಕ್ಷಣ ಮಾಹಿತಿ ನೀಡಿದರು.
ಉಪ ಸ್ಟೇಷನ್ ಮಾಸ್ಟರ್ (ವಾಣಿಜ್ಯ), ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಮತ್ತು ಮಹಿಳಾ ರೈಲ್ವೆ ಸಿಬ್ಬಂದಿಯೊಂದಿಗೆ, ಮಹಿಳೆಯನ್ನು ನಿಲ್ದಾಣದೊಳಗಿನ ಸುರಕ್ಷಿತ ಮತ್ತು ಖಾಸಗಿ ಆವರಣಕ್ಕೆ ಸ್ಥಳಾಂತರಿಸಿದರು. ಗುರುವಾರ ಬೆಳಿಗ್ಗೆ 8.30 ರ ಸುಮಾರಿಗೆ, ಅರ್ಚನಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದರು.
ಹೆರಿಗೆಯ ನಂತರ, ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಸಿವಿ ರಾಮನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅರ್ಚನಾ ಕುಮಾರಿ ಅವರ ಪತಿ ನಿಶಾಂಕ್ ಕುಮಾರ್, ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಕಾಲಿಕ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
Advertisement