
ಬೆಂಗಳೂರು: ಪ್ರಕರಣದಲ್ಲಿ ಸಾಕ್ಷಿಗಳಲ್ಲದೆ, ಸಂತ್ರಸ್ತ ಮಹಿಳೆ ಬಂಡೆಯಂತೆ ನಮ್ಮೊಂದಿಗೆ ದಿಟ್ಟವಾಗಿ ನಿಂತಿದ್ದು, ಸಹಕಾರಿಯಾಯಿತು. ಇದರಿಂದ ಅಪರಾಧಿಗೆ ಶಿಕ್ಷೆ ಸಿಗುವಂತೆ ಮಾಡಲಾಯಿತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ಕೆ. ಸಿಂಗ್ ಅವರು ಹೇಳಿದ್ದಾರೆ.
ಶನಿವಾರ ಸಂಜೆ ಸಿಐಡಿ ಕಚೇರಿಯಲ್ಲಿ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತೀರ್ಪಿನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಅತ್ಯಾಚಾರ ಹಾಗೂ ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಐದು ಪ್ರಕರಣಗಳ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಆದೇಶಿಸಿತ್ತು. ಒಂದು ಪ್ರಕರಣದಲ್ಲಿ ಸಂತ್ರಸ್ತೆ ಎಲ್ಲಿಯೂ ತನ್ನ ಹೇಳಿಕೆಯನ್ನು ಬದಲಿಸಲಿಲ್ಲ. ಸಂತ್ರಸ್ತೆಯನ್ನು ಮೂರು ದಿನ ವಿಚಾರಣೆ ನಡೆಸಲಾಯಿತು. ಅಪರಾಧಿ ಪ್ರಜ್ವಲ್ ರೇವಣ್ಣ ಪರ ವಕೀಲರು ಎರಡು ದಿನ ಎಂಟು ತಾಸು ಪ್ರಶ್ನೆ ಕೇಳಿದರು. ಸಂತ್ರಸ್ತೆ ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ನಡೆದ ಘಟನೆಯನ್ನು ನ್ಯಾಯಾಧೀಶರ ಎದುರು ವಿವರಿಸಿದ್ದರು.
‘ಸಂತ್ರಸ್ತೆಯು ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಾಢ್ಯರಲ್ಲ. ಅಪರಾಧಿ ಆರ್ಥಿಕವಾಗಿ ಬಲಾಢ್ಯನಿದ್ದ. ರಾಜಕೀಯ ಪ್ರಭಾವ ಇತ್ತು. ಈ ವ್ಯತ್ಯಾಸವಿದ್ದರೂ ನ್ಯಾಯ ಬೇಕೇಬೇಕೆಂದು ಒಂದು ವರ್ಷದಿಂದ ಪ್ರಾಸಿಕ್ಯೂಷನ್ ಜತೆಗೆ ಆಕೆ ಧೈರ್ಯದಿಂದ ನಿಂತಿದ್ದರು. ತೀರ್ಪು ವಿಳಂಬವಾಗಿ ಬರುವಂತೆ ಮಾಡಲು ಕೆಲವರು ಷಡ್ಯಂತ್ರ ಮಾಡಿದ್ದರು ಎಂದು ಹೇಳಿದರು.
ಸಂತ್ರಸ್ತೆಗೆ ನ್ಯಾಯ ಕೊಡಿಸಿದ ತೃಪ್ತಿ ತನಿಖಾ ತಂಡಕ್ಕಿದೆ. ಪ್ರಕರಣದಲ್ಲಿ ಮಹಿಳಾ ಅಧಿಕಾರಿಗಳಾದ ಸೀಮಾ ಲಾಟ್ಕರ್, ಸುಮನ್ ಡಿ. ಪನ್ನೇಕರ್ ಹಾಗೂ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯ ಇನ್‌ಸ್ಟೆಕ್ಟರ್ ಎನ್.ಶೋಭಾ ಅವರು ಸಾಕಷ್ಟು ಪರಿಶ್ರಮದೊಂದಿಗೆ ತನಿಖೆ ನಡೆಸಿದ್ದರು ಎಂದು ತಿಳಿಸಿದರು.
ನಮ್ಮ ತಂಡದಲ್ಲಿ ಹೆಚ್ಚಾಗಿ ಮಹಿಳಾ ಅಧಿಕಾರಿಗಳಿದ್ದರು. ತನಿಖಾಧಿಕಾರಿ (ಐಒ) ಶೋಭಾ ತನಿಖೆಯ ನೇತೃತ್ವ ವಹಿಸಿದ್ದರು; ಹಿರಿಯ ಅಧಿಕಾರಿ ಸುಮನ್ ಅದನ್ನು ಮೇಲ್ವಿಚಾರಣೆ ಮಾಡಿದರು. ಅಧಿಕಾರಿ ಮಮತಾ ತನಿಖೆಯಲ್ಲಿ ಸಹಾಯ ಮಾಡುವುದಲ್ಲದೆ ನ್ಯಾಯಾಲಯದ ವಿಚಾರಣೆಗಳನ್ನು ಸಹ ನಿರ್ವಹಿಸಿದರು. ಬಂಧನದಿಂದ ವಿಚಾರಣೆಯವರೆಗೆ, ಅವರು ಈ ಪ್ರಕರಣದ ಪ್ರಮುಖ ಆಧಾರಕರಾಗಿದ್ದರು.
ಸಿಐಡಿ ಸೈಬರ್ ಅಪರಾಧ ಠಾಣೆಯಲ್ಲಿ ಮೂರು, ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ತೀರ್ಪು ಬಂದಿದೆ. ಉಳಿದ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ’ ಎಂದು ಹೇಳಿದರು.
ಘಟನೆ ಆದ 4 ವರ್ಷದ ಬಳಿಕ ನಮಗೆ ಕೇಸ್ ಕೊಡಲಾಗಿತ್ತು. ಸಾಕ್ಷಿಗಳನ್ನ ನೀಡಿ, ಸರಿಯಾಗಿ ಕೆಲಸ ಮಾಡಿದ್ದಕ್ಕೆ ಶಿಕ್ಷೆ ಕೊಡಿಸಲು ಸಾಧ್ಯವಾಯಿತು. ಅಪರಾಧಿಗೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡುವ ಅವಕಾಶವಿದೆ. ಪ್ರಕರಣದಲ್ಲಿ ನಮಗೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ. ಸರ್ಕಾರದ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇವೆ. ಸರ್ಕಾರದ ಅಧಿಕಾರಿಗಳಾಗಿ ನಮ್ಮ ಕೆಲಸ ಮಾಡಿದ್ದೇವೆ. ನಮ್ಮ ಚಾರ್ಜ್‌ಶೀಟ್, ಕೋರ್ಟ್ ಎತ್ತಿ ಹಿಡಿದಿದೆ. ಹಾಗಾಗಿ, ನಮಗೆ ಹೆಮ್ಮೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪೊಲೀಸರು 100 ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ಎರಡು ವಾರದಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡಿದ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ಅದರಲ್ಲಿ ಯಾರೆಲ್ಲ ಆರೋಪಿಗಳಿದ್ದಾರೆ ಅನ್ನೋದು ನಿಮಗೆ ತಿಳಿಯುತ್ತೆ ಎಂದರು.
ಪ್ರಜ್ವಲ್ ರೇವಣ್ಣ ಅವರು ಸಾಕಷ್ಟು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಕುರಿತು ಎಸ್ಐಟಿಗೆ ಮಾಹಿತಿ ಬಂದಿದೆ. ಆದರೆ, ಅವರು ಯಾರೂ ದೂರು ನೀಡಲು ಮುಂದೆ ಬಂದಿಲ್ಲ ಎಂದು ಹೇಳಿದರು.
Advertisement