
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕವಾಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ರಾಮ ಮೂರ್ತಿ ನಗರದಲ್ಲಿ ನಡೆದಿದೆ.
ಆಗಸ್ಟ್ 2 ರಂದು ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಕಾರೊಂದು ಮತ್ತೊಂದು ಕಾರಿಗೆ ಗುದ್ದಿದ ನಂತರ ಜಗಳ ಆರಂಭವಾಗಿದೆ.
ಮದ್ಯದ ಅಮಲಿನಲ್ಲಿದ್ದ ಎರಡನೇ ಕಾರಿನ ಚಾಲಕ ಕಾರಿನಿಂದ ಇಳಿದು, ಅವಾಚ್ಯ ಶಬ್ದಗಳಿಂದ ಮತ್ತೊಂದು ಕಾರಿನ ಚಾಲಕನನ್ನು ನಿಂದಿಸಲು ಆರಂಭಿಸಿದಾಗ ಮಾತಿಗೆ ಮಾತು ಬೆಳೆದು ಸಾರ್ವಜನಿಕವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ವಾಗ್ವಾದದ ಸಂದರ್ಭದಲ್ಲಿ ಆರೋಪಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದಾಗಿ ರಿಶ್ವಾ ಮೆಹ್ತಾ ಎಂದು ಗುರುತಿಸಲಾದ ದೂರುದಾರ ಆರೋಪಿಸಿದ್ದಾರೆ. ಘಟನೆಯ ನಂತರ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ ಸಂಚಾರ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ .
ಕಳೆದ ತಿಂಗಳು ಬೆಂಗಳೂರಿನ ಮೋದಿ ಆಸ್ಪತ್ರೆ ಜಂಕ್ಷನ್ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದರು.
Advertisement