ವೇತನ ಹೆಚ್ಚಳ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ KSRTC ನೌಕರರ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದವು. ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಆಗಬಹುದಾದ ತೊಂದರೆಯನ್ನು ತಪ್ಪಿಸಲು ಹೈಕೋರ್ಟ್ ಮಧ್ಯಪ್ರವೇಶಿಸುವಂತೆ ಕೋರಿ ವಕೀಲರ ತಂಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ ಎಸ್ ಮುದಗಲ್ ಮತ್ತು ನ್ಯಾಯಮೂರ್ತಿ ಎಂ.ಜಿ ಶುಕುರೆ ಕಮಲ್ ಅವರ ವಿಭಾಗೀಯ ಪೀಠವು ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಗೆ ನಾಳೆ ಒಂದು ದಿನದ ಮಟ್ಟಿಗೆ ಮುಷ್ಕರ ಕೈಬಿಡುವಂತೆ ಸೂಚಿಸಿ ನಿರ್ದೇಶನ ನೀಡಿದೆ. ಆದರೆ ಇದಕ್ಕೆ ಸಮಿತಿಯು ಇನ್ನೂ ಪ್ರತಿಕ್ರಿಯಿಸಿಲ್ಲ. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ನೌಕರ ಸಂಘದ ಮನವೊಲಿಸಲು ಮುಂದಾಗಿದ್ದರು. ಸದ್ಯಕ್ಕೆ 24 ತಿಂಗಳ ಅರಿಯರ್ಸ್ ಕೊಡುತ್ತೇವೆ. 38 ತಿಂಗಳ ಅರಿಯರ್ಸ್ ಕೊಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದು ಇದಕ್ಕೆ ಒಪ್ಪದ ನೌಕರರ ಸಂಘ ಸಭೆಯಿಂದ ಹೊರಬಂದಿತು. ಸಿದ್ದರಾಮಯ್ಯ ಅವರೊಂದಿಗಿನ ಮಾತುಕತೆ ವಿಫಲವಾದ ಕಾರಣ, ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕವ್ಯಕ್ತಿ ಆಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದೆ. ವಿಧಾನಸೌಧದಲ್ಲಿ ನ್ಯಾ. ನಾಗಮೋಹನ್ ದಾಸ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಜ್ಯದ ಹಲವಾರು ಸಚಿವರ ಸಮ್ಮುಖದಲ್ಲಿ ಒಳ ಮೀಸಲಾತಿ ಕುರಿತು 1,766 ಪುಟಗಳ ಸಮೀಕ್ಷಾ ವರದಿಯನ್ನು ಸಲ್ಲಿಸಿದರು. ನಂತರ ಮಾತನಾಡಿದ ನಾಗಮೋಹನ್ ದಾಸ್ ಅವರು, ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ಮಾಡಲಾಗಿದ್ದು ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಒದಗಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಾಕ್ಷಿ ಹಾಗೂ ದೂರುದಾರ ಪಾಯಿಂಟ್ 11ರ ಬದಲು ಬೇರೆ ಜಾಗಕ್ಕೆ ಕರೆದೊಯ್ದಿದ್ದಾನೆ. ಎಸ್ಐಟಿ ತಂಡ 6ನೇ ದಿನ ಶೋಧ ಕಾರ್ಯ ಕೈಗೊಂಡಿತ್ತು. ಇನ್ನು ದೂರುದಾರ ಗುರುತು ಮಾಡಿದ್ದ 11ರ ಜಾಗಕ್ಕೆ ಕರೆದುಕೊಂಡು ಹೋಗುವ ಬದಲು ಗುಡ್ಡದ ಮೇಲ್ ಭಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಂಗ್ಲಾಗುಡ್ಡ ಪ್ರದೇಶದಲ್ಲಿ ಮೂಳೆಗಳು ಸಿಕ್ಕಿದೆ ಎನ್ನಲಾಗಿದೆ. ಕಾಡಿನೊಳಗೆ ಹೋಗಿದ್ದ ತಂಡ ನಂತರ ಉಪ್ಪು ಮತ್ತು ಅಳತೆ ಟೇಪ್ ತೆಗೆದುಕೊಂಡು ಹೋಗುವಾಗ ಒಮ್ಮೆ ಕಾಣಿಸಿಕೊಂಡಿದ್ದರು. ಹೀಗಾಗಿ ಮತ್ತೊಂದು ಅಸ್ಥಿಪಂಜರ ಸಿಕ್ಕಿರುವ ಸಾಧ್ಯತೆ ಇದೆ. ಇನ್ನು 2002 ಮತ್ತು 2003ರ ಅವಧಿಯಲ್ಲಿ ಸುಮಾರು 13ರಿಂದ 15 ವರ್ಷದ ಹೆಣ್ಣು ಮಗುವಿನ ಮೃತದೇಹ ರಾಜ್ಯ ಹೆದ್ದಾರಿ 37ರ ರಸ್ತೆ ಬದಿಯ ಅರಣ್ಯದಲ್ಲಿ ಎಸೆದು ಹೋಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಜಯಂತ್ ಟಿ ಎಂಬುವರು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ದೂರು ನೀಡಿದ್ದಾರೆ.
ಕೃಷ್ಣರಾಜ ಸಾಗರ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಮೊದಲ ಅಡಿಗಲ್ಲು ಹಾಕಿದ್ದರು ಎಂದು ಹೇಳುವ ಮೂಲಕ ಸಚಿವ ಎಚ್ ಸಿ ಮಹದೇವಪ್ಪ ವಿವಾದ ಸೃಷ್ಟಿಸಿದ್ದಾರೆ. ಕೆಆರ್ಎಸ್ ಗೇಟ್ನ ಹೆಬ್ಬಾಗಿಲಿನಲ್ಲಿ ಈಗಲೂ ಅಡಿಗಲ್ಲು ಇದ್ದು ಈ ಸತ್ಯವನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್, ಕೆಆರ್ಎಸ್ ಡ್ಯಾಂನ ಪ್ರಾರಂಭದಿಂದ ಕೊನೆಯವರೆಗೆ ಏನೆಲ್ಲ ಆಯಿತು. ಅದಕ್ಕೆ ಶ್ರಮವಹಿಸಿದ್ದು ಯಾರು ಎಂಬುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಅದನ್ನು ಬಿಟ್ಟು ಯಾರನ್ನೋ ಓಲೈಕೆ ಮಾಡಲು ಹಾಗೂ ಮತಗಳಿಸಲು ಇತಿಹಾಸ ತಿರುಚುವ ಕೆಲಸ ಮಾಡಬಾರದು ಎಂದು ಮಹದೇವಪ್ಪಗೆ ತಿರುಗೇಟು ನೀಡಿದ್ದಾರೆ.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನದ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ. ನಾಳೆ ಸೋರೆನ್ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆಯಾಗಿದ್ದು, ಅದೇ ರೀತಿ ನಾಳೆ ನಿಗದಿಯಾಗಿದ್ದ ಕಾಂಗ್ರೆಸ್‌ನ 'ಸಂವಿಧಾನ ವಿರೋಧಿ ಧೋರಣೆ' ವಿರುದ್ಧ ಬಿಜೆಪಿ ಪ್ರತಿಭಟನೆ ಕೂಡ ಮುಂದೂಡಿಕೆಯಾಗಿದೆ.
Advertisement