
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಸುಮಾರು 2,000 ಮದರಸಾಗಳಲ್ಲಿ ಕನ್ನಡ ಭಾಷಾ ಶಿಕ್ಷಣವನ್ನು ಪರಿಚಯಿಸುವ ಕಾರ್ಯಕ್ರಮ ಆರಂಭಿಸಿದೆ. 180 ಮದರಸಾ ಶಿಕ್ಷಕರಿಗೆ ತರಬೇತಿಯೊಂದಿಗೆ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆರಂಭವಾಯಿತು.
ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಕೆಡಿಎ ಅಧ್ಯಕ್ಷ ಪುರುಪೋತ್ತಮ್ ಬಿಳಿಮಲೆ, ರಾಜ್ಯ ಭಾಷೆಯ ಮೂಲಕ ಸಮುದಾಯಗಳ ನಡುವೆ ಸಂವಹನ ಮತ್ತು ತಿಳುವಳಿಕೆಯನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕನ್ನಡ ಕಲಿಕೆಯು ಅಲ್ಪಸಂಖ್ಯಾತ ಸಮುದಾಯಗಳು ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ನೆರವಾಗುತ್ತದೆ.‘ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಸೌಹಾರ್ದತೆಯ ಬುನಾದಿಗಳು’ ಎಂಬ ಶೀರ್ಷಿಕೆಯಡಿ 100 ಪುಸ್ತಕಗಳನ್ನು ಪ್ರಕಟಿಸಲು ಕೆಡಿಎ ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರಸ್ತುತ ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತಿರುವ ಉರ್ದು ಅಕಾಡೆಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ತರುವಂತೆ ಬಿಳಿಮಲೆ ಸಲಹೆ ನೀಡಿದರು. ಇತರ ಭಾಷಾ ಅಕಾಡೆಮಿಗಳು ಈಗಾಗಲೇ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ ಮತ್ತು ಉರ್ದು ಅಕಾಡೆಮಿಯನ್ನು ಈ ರೀತಿ ಮಾಡುವುದರಿಂದ ಸಾರ್ವಜನಿಕ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಇರುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್, ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಮಸೀದಿಗಳಲ್ಲಿ ಕೆಲಸ ಮಾಡುವ ಮೌಲ್ವಿಗಳಿಗೂ ಕನ್ನಡ ಪಾಠ ಕಲಿಸಲಾಗುವುದು ಎಂದು ತಿಳಿಸಿದರು.
Advertisement