
ವಿಜಯಪುರ: ವಿಜಯಪುರ ಹೊರವಲಯದ ಯೋಗಾಪುರದ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಕೈಗಡಿಯಾರ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 5ನೇ ತರಗತಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾನೆ.
ಅನ್ಷಾ ಜಗ್ತಾಪ್ (11) ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಬಾಲಕನ ಸಾವು ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ಆರೋಪದ ಮೇಲೆ ಶವವನ್ನು ಶಾಲೆಯ ಆವರಣದಲ್ಲಿರಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ಮಗನು ಧರಿಸಿದ್ದ ಕೈಗಡಿಯಾರ ವಿಚಾರವಾಗಿ ಶಾಲೆಯಲ್ಲಿ ಗಲಾಟೆಯಾಗಿದೆ. ಮೂವರು ವಿದ್ಯಾರ್ಥಿಗಳು ಮಗನ ಮೇಲೆ ಹಲ್ಲೆ ನಡೆಸಿ ಕೈಗಡಿಯಾರವನ್ನು ಕಿತ್ತುಕೊಂಡಿದ್ದಾರೆ. ಹಲ್ಲೆ ಬಳಿಕ ಮಗ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ದಾಳಿಯ ಬಗ್ಗೆ ಪ್ರಾಂಶುಪಾಲರು ಸೇರಿದಂತೆ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ನಡುವೆ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ್ ಮತ್ತು ಗಾಂಧಿ ಚೌಕ್ ಠಾಣೆಯ ಸಿಪಿಐ ಮಲ್ಲಯ್ಯ ಮಠಪತಿ ಶಾಲೆಗೆ ಭೇಟಿ ನೀಡಿ ಅನ್ಶಾ ಅವರ ಪೋಷಕರು ಮತ್ತು ಸ್ಥಳೀಯರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದರು. ಬಳಿಕ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಮಗನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ ಬಳಿಕ ಡಿಸ್ಚಚಾರ್ಜ್ ಮಾಡಲಾಗಿತ್ತು. ಆದರೆ, ಆಸ್ಪತ್ರೆಯಿಂದ ಮನೆಗೆ ಬಂದ 2 ದಿನಗಳ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಮಗ ಸಾವನ್ನಪ್ಪಿದ. ವಿದ್ಯಾರ್ಥಿಗಳ ದಾಳಿಯಿಂದಾಗಿ ಮಗ ಸಾವನ್ನಪ್ಪಿದ್ದಾನೆಂದು ಬಾಲಕನ ತಂದೆ ಆರೋಪಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Advertisement