
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕಾಗಿ ತವರು ಮನೆಗೆ ಬಂದಿದ್ದ ನವ ವಿವಾಹಿತ ಮಹಿಳೆಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಗೀತಾ (23) ಮೃತಪಟ್ಟ ದುರ್ದೈವಿ. ಲಗ್ಗೆರೆ ಬ್ರಿಡ್ಜ್ ಬಳಿ ಅವರು ತೆರಳುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಗೀತಾ ಅವರ ತಲೆಗೆ ತೀವ್ರವಾದ ಗಾಯಗಳಾಗಿ, ಸ್ಥಳದಲ್ಲೇ ಅವರು ಕೊನೆಯುಸಿರೆಳೆದರು.
ಗೀತಾ ಕೇವಲ ಎರಡೂವರೆ ತಿಂಗಳ ಹಿಂದೆ ಸುನೀಲ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಹಬ್ಬಕ್ಕಾಗಿ ದಂಪತಿಗಳು ತವರು ಮನೆಗೆ ಬಂದಿದ್ದರು. ಚಂದ್ರ ಲೇಔಟ್ ನಿಂದ ನಂದಿನಿ ಲೇಔಟ್‌ನಲ್ಲಿರುವ ಗೀತಾ ಅವರ ನಾದಿನಿ ಮನೆಗೆ ಅರಿಶಿಣ-ಕುಂಕುಮ ಪಡೆಯಲು ತೆರಳುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಇನ್ನೂ ಅಪಘಾತದಲ್ಲಿ ಪತಿ ಸುನೀಲ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿಯ ಚಾಲಕನ ಎಡವಟ್ಟಿನಿಂದ ಈ ಅಪಘಾತ ಸಂಭವಿಸಿದೆ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಈ ದುರಂತದ ಸುದ್ದಿ ತಿಳಿಯುತ್ತಿದ್ದಂತೆ, ಚನ್ನಪಟ್ಟಣದಲ್ಲಿರುವ ಗೀತಾ ಅವರ ಅಜ್ಜಿ ರಾಕಮ್ಮ ಅವರಿಗೆ ತೀವ್ರ ಆಘಾತವಾಗಿ ಅವರು ಕೂಡಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Advertisement