
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಅನುದಾನ ದೊರೆಯುತ್ತಿಲ್ಲ. ಬೆಂಗಳೂರನ್ನು ಕಡೆಗಣಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಆರೋಪಿಸಿದರು.
ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ, ಹೊಸ ಮೆಟ್ರೋ ಮಾರ್ಗಕ್ಕೆ ಶಂಕು ಸ್ಥಾಪನೆ ಹಾಗೂ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಮಗೆ ಸೂಕ್ತ ಅನುದಾನವನ್ನು ನೀಡುತ್ತಿಲ್ಲ. ಬೆಂಗಳೂರನ್ನು ನಿರ್ಲಕ್ಷಿಸಲಾಗಿದೆ. ನಗರಕ್ಕೆ ಏನು ಅಗತ್ಯವಿದೆ. ಏನನ್ನೂ ನೀಡಬೇಕು ಎಂಬುದನ್ನು ಪ್ರಧಾನಿಗೆ ಹೇಳುತ್ತೇನೆ ಎಂದರು.
ಕೇಂದ್ರದಿಂದ ಶೇ.20 ರಷ್ಟು ಮಾತ್ರ ಅನುದಾನ: ಹಳದಿ ಮಾರ್ಗದ ಯೋಜನಾ ವೆಚ್ಚದ ಶೇ. 80 ರಷ್ಟು ರಾಜ್ಯ ಸರ್ಕಾರ ಮತ್ತು ಶೇ. 20 ರಷ್ಟು ಕೇಂದ್ರದ ಬಿಜೆಪಿ ಸರ್ಕಾರ ಭರಿಸುತ್ತಿದೆ. ಕೆಲವೆಡೆ ಕೇಂದ್ರ ಸರ್ಕಾರ ಶೇ. 11ರಷ್ಟು ಮಾತ್ರ ಖರ್ಚು ಮಾಡಿದೆ ಎಂದರು.
ಬೆಂಗಳೂರನ್ನು ರಾಷ್ಟ್ರೀಯ ರಾಜಧಾನಿಯಂತೆ ಗಮನಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಬಯಸುವುದಾಗಿ ಹೇಳಿದ ಡಿಕೆ ಶಿವಕುಮಾರ್, ಬಿಜೆಪಿ ಸಂಸದರು ಅಥವಾ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಹೆಸರಲ್ಲಿ ಮತಗಳನ್ನು ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
Advertisement