
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಇದು ಬೇರೆ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದೆ.
ರಾಜ್ಯದಲ್ಲಿ ಅಬ್ಬರಿಸುತ್ತಿರುವ ಆಶ್ಲೇಷ ಮಳೆ ಊರೂರಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಕಳೆದ ಎರಡು ಮೂರು ದಿನದಿಂದ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಉತ್ತರದ ಜಿಲ್ಲೆಗಳಲ್ಲಂತೂ ನರಕವೇ ಸೃಷ್ಟಿಯಾಗಿದೆ.
ಇಷ್ಟು ದಿನ ಶಾಂತವಾಗಿದ್ದ ಹಳ್ಳಕೊಳ್ಳಗಳೆಲ್ಲಾ ಮತ್ತೆ ಹುಚ್ಚೆದ್ದು ಹರಿಯುತ್ತಿದ್ದು, ಮಹಾಮಳೆಯ ಜೊತೆ ಜೊತೆಗೆ ಸಾವು ನೋವುಗಳನ್ನೂ ಹೊತ್ತು ತರ್ತಿದೆ. ಕೊಪ್ಪಳ, ಧಾರವಾಡ ಜಿಲ್ಲೆ ಜನರಂತೂ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.
ಬೆಂಗಳೂರಿಗೆ ಮಧ್ಯಮದಿಂದ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲೆಲ್ಲಾ ನೀರು ತುಂಬಿಕೊಂಡಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜಯನಗರ, ಮೆಜೆಸ್ಟಿಕ್, ಎಂಜಿ ರಸ್ತೆ, ವಿಜಯ ನಗರ, ಆರ್‌ಟಿ ನಗರ, ಇಂದಿರಾನಗರ ಮತ್ತು ಕೆಆರ್ ಪುರಂನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ದಿನವೂ ಮಳೆಯಾಗುತ್ತಿದೆ. ರಾಜ್ಯದ ಹಲವೆಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗ್ಗೆಯಿಂದಲೂ ಬೆಂಗಳೂರಿನ ಹಲವೆಡೆ ಜೋರು ಮಳೆಯಾಗುತ್ತಿದೆ. ಸಂಜೆ ಕೂಡ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
Advertisement