
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಸದನ ಕದನಕ್ಕೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿವೆ.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ, ರಸಗೊಬ್ಬರ ಅಭಾವ, ಅನುದಾನ ತಾರತಮ್ಯ, ಒಳಮೀಸಲಾತಿ ವಿಳಂಬ, ಸುರ್ಜೇವಾಲಾ ಸಭೆಗಳ ವಿಷಯ, ಕಾನೂನು ಸುವ್ಯವಸ್ಥೆ ವೈಫಲ್ಯ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಮತ್ತೊಂದೆಡೆ ಕೇಂದ್ರದ ಅನುದಾನ ತಾರತಮ್ಯ, ಮತಗಳ್ಳತನ ಹಾಗೂ ಮತಪಟ್ಟಿ ಹಗರಣ, ಅಭಿವೃದ್ಧಿಗೆ ಹೆಚ್ಚಿಸಿರುವ ಹಣದ ಅಂಕಿ-ಅಂಶ ಸಹಿತ ತಿರುಗೇಟು ನೀಡಲು ಸಿದ್ಧತೆ ನಡೆಸಿದೆ. ಪರಿಣಾಮ ತಲಾದಾಯದಲ್ಲಿ ರಾಜ್ಯ ದೇಶದಲ್ಲೇ ನಂ.1 ಆಗಿರುವುದು, ಗ್ಯಾರಂಟಿ ಸಾಧನೆ, ಬಿಜೆಪಿ ಅವಧಿಯಲ್ಲಿ ಮಾಡಿದ್ದ ಯಡವಟ್ಟು ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಅವರ ತಂಡವೂ ಸರ್ವ ಸನ್ನದ್ಧವಾಗಿದೆ.
ಹೀಗಾಗಿ ಇಂದಿನಿಂದ ಆ.22ರವರೆಗೆ ಒಟ್ಟು 10 ದಿನ ಕಾಲ ನಡೆಯಲಿರುವ ಸದನದಲ್ಲಿ ನಡೆಯುವ ಕಲಾಪಗಳು ಕುತೂಹಲ ಮೂಡಿಸಿದೆ.
ಅಧಿವೇಶನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕಾರ್ಯತಂತ್ರವನ್ನು ರೂಪಿಸಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿದಯೇಂದ್ರ ಅವರು, ರಸಗೊಬ್ಬರಗಳ ಕೊರತೆ, ಉತ್ತರ ಕರ್ನಾಟಕ ಜಿಲ್ಲೆಗಳ ಬಗ್ಗೆ ಸರ್ಕಾರದ ತಾರತಮ್ಯ, ಭ್ರಷ್ಟಾಚಾರ ಮತ್ತು ಇತರ ಸಮಸ್ಯೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಎರಡೂ ಪಕ್ಷಗಳು ಚರ್ಚಿಸಿವೆ ಎಂದು ಹೇಳಿದರು.
ಅಧಿವೇಶನ ನಡೆಸಲು ರಾಜ್ಯ ಸರ್ಕಾರಕ್ಕೆ ಆಸಕ್ತಿಯೇ ಇಲ್ಲ. ಹೀಗಾಗಿಯೇ 15 ದಿನಗಳ ಕಾಲ ಅಧಿವೇಶನ ನಡೆಸುವ ಬದಲು, ಕೇವಲ 10 ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು.
ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳಲಿದ್ದು, ಇತ್ತೀಚೆಗೆ ಅಗಲಿದ ಪೋಪ್ ಫ್ರಾನ್ಸಿಸ್, ಹಿರಿಯ ರಾಜಕಾರಣಿ ಡಾ.ಎನ್.ತಿಪ್ಪಣ್ಣ, ಸಾಹಿತಿಗಳಾದ ಎಚ್. ಎಸ್.ವೆಂಕಟೇಶಮೂರ್ತಿ, ಜಿ.ಎಸ್.ಸಿದ್ದಲಿಂಗಯ್ಯ ಸೇರಿ ಹಲವು ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ.
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿತ್ತು. ಈ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು. ಈ ಕುರಿತ ಸ್ಥಿರೀಕರಣ ಪ್ರಸ್ತಾವ ಮೊದಲ ದಿನವೇ ಮಂಡನೆಯಾಗಲಿದ್ದು, ವಿಧಾನಸಭೆ ಅನುಮೋದನೆ ನೀಡಬೇಕಿದೆ.
ಬಳಿಕ ಪ್ರಶೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪ ನಡೆಯಲಿದ್ದು, ಈ ವೇಳೆ ಎತ್ತಿನ ಹೊಳೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಯೋಜನೆ ವಿಳಂಬದ ಬಗ್ಗೆ ತೀವ್ರ ಚರ್ಚೆಯಾಗುವ ಸಾಧ್ಯತೆಯಿದೆ.
ರಾಜ್ಯಪಾಲರು, ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಸಹಕಾರರ ಸಂಘಗಳ ತಿದ್ದುಪಡಿ ವಿಧೇಯಕ-2024 ಹಾಗೂ ಸೌಹಾರ್ದ ಸಂಘಗಳ ತಿದ್ದುಪಡಿ ವಿಧೇಯಕಗಳಿಗೆ ರಾಜ್ಯಪಾಲರ ಸಲಹೆ ಮೇರೆಗೆ ಕೆಲ ಬದಲಾವಣೆ ಮಾಡಲು ಸಚಿವ ಸಂಪುಟ ನಿರ್ಧರಿಸಿದ್ದು, ಕರ್ನಾಟಕ ಭೂ ಸುಧಾರಣೆ, ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ ಸೇರಿ 20ಕ್ಕೂ ಹೆಚ್ಚು ವಿಧೇಯಕಗಳನ್ನು ಈ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.
Advertisement