
ಬೆಂಗಳೂರು: ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೋಡ್ ರೇಜ್ ಪ್ರಕರಣದ ನಂತರ 10-12 ಕ್ಯಾಬ್ ಚಾಲಕರ ಗುಂಪು ಮಹಿಳೆಯನ್ನು ಹಿಂಬಾಲಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಹುಳಿಮಾವು ನಲ್ಲಿ ನಡೆದಿದೆ. ಈ ಗುಂಪು ತನ್ನ ಕುಟುಂಬದ ಮೇಲೂ ಹಲ್ಲೆ ನಡೆಸಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಅಡ್ಡಾದಿಡ್ಡಿಯಾಗಿ ನನ್ನ ಕಾರನ್ನು ಹಿಂದಿಕ್ಕಿದ್ದ ಕ್ಯಾಬ್ ಚಾಲಕರೊಬ್ಬರು, ಕ್ಯಾತೆ ತೆಗೆದು ಜಗಳ ಮಾಡಿದರು. ತದನಂತರ ಗುಂಪು ತನ್ನ ಅಪಾರ್ಟ್‌ಮೆಂಟ್‌ನವರೆಗೆ ಇಟ್ಟಿಗೆ ಹಿಡಿದುಕೊಂಡು ಹಿಂಬಾಲಿಸಿತು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವ್ಯಕ್ತಿಯೊಬ್ಬ ಕಾರಿನ ಗಾಜನ್ನು ಗುದ್ದುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಜಗಳದ ವೇಳೆ ಕಾರಿನ ಕಿಟಕಿಯೊಂದು ಒಡೆದುಹೋಗಿದೆ. ಇದಾದ ಸ್ವಲ್ಪ ಸಮಯದ ನಂತರ ಕ್ಯಾಬ್ ಡ್ರೈವರ್‌ಗಳ ಗುಂಪು ಎಲ್ಲಾ ಕಡೆಯಿಂದ ಮಹಿಳೆಯ ಕಾರನ್ನು ಸುತ್ತುವರೆದಿವೆ. ಚಾಲಕರ ಗುಂಪು ಮಹಿಳೆಯ ವಸತಿ ಪ್ರದೇಶಕ್ಕೆ ಪ್ರವೇಶಿಸುವುದನ್ನು ಮತ್ತೊಂದು ವೀಡಿಯೊ ತೋರಿಸುತ್ತದೆ. ಆಕೆಯ ಕುಟುಂಬದ ಮೇಲೂ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳು ಆಕೆಯ ಕಾರನ್ನು ಧ್ವಂಸಗೊಳಿಸಿದ್ದು, ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆಕೆಯ ತಂದೆ ಮತ್ತು ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯ ತಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌ಎಸ್) ವಿವಿಧ ಸೆಕ್ಷನ್ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆಗಳು ನಡೆಯುತ್ತಿವೆ.
Advertisement