
ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ 5 ಆರೋಪಿಗಳನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಆರೋಪಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಐವರನ್ನು ಇಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಐವರು ಆರೋಪಿಗಳನ್ನು ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಬರಲಾಗಿತ್ತು. ಸಿಸಿಹೆಚ್ 64ರ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಆದೇಶದಂತೆ ಐವರು ಆರೋಪಿಗಳನ್ನು ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.
ಈ ವೇಳೆ ಎಲ್ಲಾ ಆರೋಪಿಗಳನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ಆದೇಶಿಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇಲ್ಲಿಂದ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತದೆ.
ಈ ಹಿಂದೆಯೂ ದರ್ಶನ್ ಇದೇ ಜೈಲಿನಲ್ಲಿ ಕೆಲ ದಿನಗಳಿದ್ದು, ಐಷಾರಾಮಿ ಜೀವನದ ಫೋಟೋ ವೈರಲ್ ಬೆನ್ನಲ್ಲೇ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮತ್ತೆ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಲಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದ್ದು, ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ A1 ಪವಿತ್ರಾಗೌಡ, A2 ದರ್ಶನ್, A11 ನಾಗರಾಜು, A12 ಲಕ್ಷ್ಮಣ, A14 ಪ್ರದೋಶ್ ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಿದ್ದು, ಕಾರಾಗೃಹದ ಕ್ವಾರಂಟೈನ್ ಜೈಲಿಗೆ ಹಾಕಿದ್ದಾರೆ.
ಇನ್ನು ಪವಿತ್ರ ಗೌಡ ಮಾತ್ರ ಪ್ರಮುಖ ಜೈಲಿನ ಮಹಿಳಾ ಬ್ಯಾರಕ್ ಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೈಲು ವೈದ್ಯರಿಂದ ಆರೋಗ್ಯ ತಪಾಸಣೆ ಬಳಿಕ ಆರೋಪಿಗಳಿಗೆ ಕೈದಿ ನಂಬರ್ ನೀಡಲಾಗುತ್ತದೆ.
ಮಧ್ಯಂತರ ಜಾಮೀನು ಪಡೆದಾಗ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ ಕಾರಣ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.
Advertisement