
ಬೆಂಗಳೂರು: ಬೀದಿನಾಯಿಗಳ ಸಮಸ್ಯೆ ಕುರಿತು ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆ ವೇಳೆ ಜೆಡಿಎಸ್ ನ ಸದಸ್ಯ ಎಸ್.ಎಲ್. ಭೋಜೇಗೌಡ ನೀಡಿದ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
ನಾನು ಚಿಕ್ಕಮಗಳೂರು ನಗರ ಸಭೆ ಅಧ್ಯಕ್ಷನಾಗಿದ್ದಾಗ 2800 ಬೀದಿ ನಾಯಿಗಳಿಗೆ ಮಾಂಸಾಹಾರದಲ್ಲಿ ಔಷಧ ಹಾಕಿ ಸಾಯಿಸಿದ್ದೆವು. ಬಳಿಕ ಅವುಗಳನ್ನು ತೆಂಗಿನ ಮರದ ಬುಡದಲ್ಲಿ ಹೂತುಹಾಕಿದ್ದೆವು ಎಂದಿದ್ದಾರೆ. ಈ ಹೇಳಿಕೆಯು ಪ್ರಾಣಿ ದಯಾ ಸಂಘದವರು ಮತ್ತು ಸಾರ್ವಜನಿಕರನ್ನು ಕೆರಳಿಸಿದೆ.
ವಿಧಾನಪರಿಷತ್ತಿನಲ್ಲಿ ನಿನ್ನೆ ನಡೆದ ಚರ್ಚೆ ವೇಳೆ ಭೋಜೇಗೌಡ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ ಯಾವ ಅವಧಿಯಲ್ಲಿ ಇದು ನಡೆದಿದೆ ಎಂಬುದನ್ನು ಅವರು ಉಲ್ಲೇಖಿಸಿಲ್ಲ. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕ ಸರ್ಕಾರವು ಅಸಹಾಯಕತೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ , ಪ್ರಾಣಿ ದಯಾ ಸಂಘದವರು ಬರ್ತಾರೆ ಅಂದಾಗ, ಪ್ರತಿ ಪ್ರಾಣಿ ದಯಾ ಸಂಘದವರ ಮನೆಗೆ ಹತ್ತು ನಾಯಿಗಳನ್ನು ಬಿಡಬೇಕು ಎಂದು ಭೋಜೇಗೌಡ ಹೇಳಿದ್ದಾರೆ.
ನಾಯಿ ಕಡಿತ ಪ್ರಕರಣಗಳನ್ನು ಪ್ರತಿ ದಿನ ನೋಡುತ್ತಿದ್ದೇವೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬೀದಿ ನಾಯಿಗಳನ್ನು ಹೊರಹಾಕಲು ವಿರೋಧಿಸಿದರೆ, ವಾಸ್ತವವನ್ನು ಅರ್ಥಮಾಡಿಸಿಕೊಳ್ಳಲು ಸರ್ಕಾರ ಕೆಲವು ನಾಯಿಗಳನ್ನು ಅವರ ಕಾಂಪೌಂಡ್‌ಗಳಲ್ಲಿ ಬಿಡಲಿ ಎಂದು ಹೇಳಿದ ಭೋಜೇಗೌಡ, ಒಂದು ವೇಳೆ ಮಕ್ಕಳನ್ನು ಬೀದಿನಾಯಿಗಳು ಕಚ್ಚಿದರೆ ಅವರು ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.
ಬೀದಿನಾಯಿಗಳನ್ನು ತಕ್ಷಣವೇ ಹಿಡಿದು, ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ನಾಗರಿಕ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಭೋಜೇಗೌಡ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ 2025 ಜನವರಿಯಿಂದ ಆಗಸ್ಟ್ ವರೆಗೆ 2.86 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು ಶಂಕಿತ ರೇಬೀಸ್‌ನಿಂದ 26 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆಗಸ್ಟ್ 4 ಮತ್ತು 10 ರ ನಡುವೆ 5,652 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಆದರೂ ಆ ವಾರದಲ್ಲಿ ಯಾವುದೇ ರೇಬೀಸ್ ಸಂಬಂಧಿತ ಸಾವುಗಳು ದಾಖಲಾಗಿಲ್ಲ.
ಇತ್ತೀಚೆಗೆ ಕೆಂಗೇರಿ ಬಳಿಯ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಾದ ಹಾವೇರಿಯ ಸುಜನ್ಯ ಜಿ ಜೆ ಮತ್ತು ತೆಲಂಗಾಣದ ರೇಗಾ ನಿಕ್ಷಿತಾ ಎಂಬುವರು ಬೀದಿನಾಯಿಗಳ ಹಿಂಡು ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು."ಅವರು ಈಗ ಚೆನ್ನಾಗಿದ್ದಾರೆ. ಆದರೆ ವಿವರವಾದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಹೇಳಿದರು.
Advertisement