
ಮಂಗಳೂರು: ಯುವತಿಯೊಂದಿಗೆ ಮಾತನಾಡುತ್ತಿದ್ದ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಪಾಂಡೇಶ್ವರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗಣೇಶ್, ಶ್ರೇಯಸ್, ಚಿಂಟು, ಚಂದನ್, ನಾಗರಾಜ್ ಮತ್ತು ರಾಮಚಂದ್ರ ಬಂಧಿತ ಆರೋಪಿಗಳು. ಯುವತಿ ಹಾಗೂ ಯುವಕ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದ ಬಳಿ ಮಾತನಾಡುತ್ತ ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಏಳೆಂಟು ಮಂದಿಯ ತಂಡ ತಡೆದು ಜೀವ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಯುವತಿ ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ನಗರದ ಪದವಿ ಪೂರ್ವ ಕಾಲೇಜೊಂದರ ವಿದ್ಯಾರ್ಥಿನಿಯಾದ ಯುವತಿ ಕಾಲೇಜು ಮುಗಿಸಿ ತನ್ನ ಗೆಳತಿಯೊಂದಿಗೆ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಬಳಿಕ ಗೆಳತಿ ಅಲ್ಲಿಂದ ಬಸ್‌ನಲ್ಲಿ ತನ್ನ ಮನೆಗೆ ತೆರಳಿದ್ದಳು. ಬಳಿಕ ವಿದ್ಯಾರ್ಥಿನಿಯು 3.30ರ ಸುಮಾರಿಗೆ ಅಲ್ಲಿಗೆ ಬಂದ ತನ್ನ ಸ್ನೇಹಿತೆಯ ಸಂಬಂಧಿಯಾದ ಬೇರೆ ಸಮುದಾಯದ ಯುವಕನೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದಳು.
ಈ ವೇಳೆ ಸುಮಾರು 7ರಿಂದ 8 ಮಂದಿ ಅಪರಿಚಿತರು ಅಡ್ಡಗಟ್ಟಿ, ಜೊತೆಗಿದ್ದ ಯುವಕನನ್ನು ತಡೆದಿದ್ದಾರೆ. ಅಲ್ಲದೆ "ಯುವಕನ ಜೊತೆ ಯಾಕೆ ಹೋಗುತ್ತಿದ್ದಿಯಾ?, ಏನು ಮಾತನಾಡುತ್ತಿದ್ದಿಯಾ?" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಪೊಲೀಸ್ ಗಸ್ತು ವಾಹನ ಶೀಘ್ರದಲ್ಲೇ ಬಂದಿತು, ವಿದ್ಯಾರ್ಥಿನಿ ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿನಿ ಮನೆಗೆ ಹೋಗಿ, ತನ್ನ ಕುಟುಂಬಕ್ಕೆ ತಿಳಿಸಿದಳು, ಅದಾದ ನಂತರ ತನ್ನ ಪೋಷಕರ ಬೆಂಬಲದೊಂದಿಗೆ ದೂರು ದಾಖಲಿಸಿದಳು, ಪೊಲೀಸರು ಆರು ಶಂಕಿತರನ್ನು ಬಂಧಿಸಿದ್ದಾರೆ, ಇತರರನ್ನು ಪತ್ತೆಹಚ್ಚುತ್ತಿದ್ದಾರೆ.
Advertisement