
ಕಾರವಾರ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail)ಗೆ ಜಾರಿ ನಿರ್ದೇಶನಾಲಯ ಆಘಾತ ಶಾಕ್ ನೀಡಿದ್ದು, ದಾಳಿ ವೇಳೆ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕ ಸತೀಶ್ ಸೈಲ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡಿದೆ.
ಕಳೆದ ಎರಡು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ದಾಳಿ ಶೋಧ ನಡೆಸಿದ್ದರು. ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ಶಾಸಕ ಸತೀಶ್ ಸೈಲ್ ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧ ನಡೆದಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಶೋಧಿಸಲಾದ ಇತರ ಸಂಸ್ಥೆಗಳಲ್ಲಿ ಆಶಾಪುರ ಮಿನೆಕೆಮ್, ಶ್ರೀ ಲಾಲ್ ಮಹಲ್, ಸ್ವಸ್ತಿಕ್ ಸ್ಟೀಲ್ಸ್ (ಹೊಸೆಪೇಟೆ), ಐಎಲ್‌ಸಿ ಇಂಡಸ್ಟ್ರೀಸ್, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ನಂತಹ ಕಂಪನಿಗಳು ಸೇರಿವೆ ಎಂದು ಇಡಿ ತಿಳಿಸಿದೆ.
ಶೋಧದ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಹಚ್ಚಿದ್ದಾರೆ. ಅಂತೆಯೇ ಶಾಸಕ ಸತೀಶ್ ಸೈಲ್ ಮನೆ ಮತ್ತು ಬ್ಯಾಂಕ್ ಖಾತೆಯಲ್ಲಿದ್ದ 1.68 ಕೋಟಿ ನಗದು, ಮತ್ತು ಅಂದಾಜು 6,20,45,319 ರೂ. ಮೌಲ್ಯದ 6.75 ಕೆಜಿ ಚಿನ್ನವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 14.13 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಇಡಿ ಅಧಿಕಾರಿಗಳು 2 ಟ್ರಂಕ್ನಲ್ಲಿ ಚಿನ್ನ, ಹಣ, ದಾಖಲೆ ಕೊಂಡೊಯ್ದಿದ್ದಾರೆ. ಇಡಿ ಶೋಧದ ವೇಳೆ ಹಣಕಾಸು, ದೋಷಾರೋಪ ದಾಖಲೆ, ಇ-ಮೇಲ್ ಹಾಗೂ ಇತರ ದಾಖಲೆಗಳು ಪತ್ತೆಯಾಗಿದ್ದವು ಎಂದು ಹೇಳಲಾಗಿದೆ.
ಅಕ್ರಮ ಅದಿರು ಸಾಗಾಟ ಪ್ರಕರಣ
ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯವು ಸೈಲ್ ಅವರಿಗೆ ಶಿಕ್ಷೆ ವಿಧಿಸಿತ್ತು. ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಹೈಕೋರ್ಟ್ನಲ್ಲಿ ಜಾಮೀನು ಪಡೆದುಕೊಂಡಿದ್ದರು.
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.
ನಂತರ ಬೇಲೆಕೇರಿ ಅದಿರು ಸಾಗಾಟ ಪ್ರಕರಣ ಸಂಬಂಧಿತ 6 ಪ್ರಕರಣಗಳಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ಆನಂತರ ಜೈಲು ಪಾಲಾಗಿದ್ದ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಿಸುತ್ತಿದ್ದರು.
ನಂತರ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸೈಲ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನವೆಂಬರ್ನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಸೈಲ್ಗೆ ವಿಧಿಸಿರುವ ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಡಲು ಸೂಚಿಸಿತ್ತು. ದಂಡ ಮೊತ್ತದ ಶೇ 25 ರಷ್ಟನ್ನು ಠೇವಣಿ ಇಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು.
Advertisement