
ದಾವಣಗೆರೆ: ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಕುಟುಂಬ ಸದಸ್ಯರಿಗೆ ಸೇರಿದ M/S ಜಿಎಂಎಂ ಎಂಟರ್‌ಪ್ರೈಸಸ್ ಸೇರಿ 26 ಕ್ವಾರಿ ಗುತ್ತಿಗೆದಾರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಂಡ ವಿಧಿಸಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಕುಟುಂಬ ಸದಸ್ಯರಿಗೆ ಸೇರಿದ ಮೂರು ಗುತ್ತಿಗೆಗಳು ಇದರಲ್ಲಿ ಸೇರಿವೆ. ಜುಲೈನಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿದ ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಕ್ರಮ ಕೈಗೊಂಡಿದೆ. ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡ ಇಲಾಖೆಯು ತಲಾ 25,000 ರೂ.ಗಳ ದಂಡ ವಿಧಿಸಿದೆ.
ಮಲ್ಲಿಕಾರ್ಜುನ ಸಹೋದರ ಎಸ್.ಎಸ್. ಗಣೇಶ್, ದಾವಣಗೆರೆಯ ಹೆಬ್ಬಾಳ ಗ್ರಾಮದಲ್ಲಿ ಮೂರು ಸರ್ವೇ ಸಂಖ್ಯೆಗಳಲ್ಲಿ (144, 145 ಮತ್ತು 148) ಕ್ವಾರಿಗಳನ್ನು ನಿರ್ವಹಿಸುತ್ತಿರುವ ಜಿಎಂಎಂ ಎಂಟರ್‌ಪ್ರೈಸಸ್‌ನ ಪಾಲುದಾರರಾಗಿದ್ದಾರೆ. ಈ ಮೂರು ಸ್ಥಳಗಳಲ್ಲಿ, ಪರಿಸರ ಅನುಮತಿ ಸೇರಿದಂತೆ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಲಾಗಿದೆ.
ಗುತ್ತಿಗೆ ಪ್ರದೇಶದ ವ್ಯಾಪ್ತಿಯಿಂದ 7.5 ಮೀಟರ್ ಬಫರ್ ವಲಯವನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ, ಈ ಪ್ರದೇಶಕ್ಕೆ ಬೇಲಿ ಹಾಕುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ GMM ಎಂಟರ್‌ಪ್ರೈಸಸ್‌ಗೆ ಒಟ್ಟಾರೆಯಾಗಿ 75,000 ರೂ. ದಂಡ (ಪ್ರತಿ ಕ್ವಾರಿಗೆ 25,000 ರೂ.) ವಿಧಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಇತರ 23 ಗುತ್ತಿಗೆದಾರರು ಕೂಡ ಇದೇ ರೀತಿಯಾಗಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಅವರಿಗೂ ಸಹ ತಲಾ 25 ಸಾವಿರ ಇದೇ ರೀತಿಯ ಉಲ್ಲಂಘನೆಗಳು ಕಂಡುಬಂದಿವೆ. ಆದ್ದರಿಂದ ಅವರ ಮೇಲೂ ತಲಾ 25,000 ರೂ. ದಂಡ ವಿಧಿಸಲಾಗಿದೆ.
ಗಣಿ ಇಲಾಖೆಯಿಂದ 72 ಕ್ವಾರಿ ಗುತ್ತಿಗೆದಾರರಿಗೆ ನೋಟಿಸ್
ಇತ್ತೀಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ತಹಶೀಲ್ದಾರ್, ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಮಹಜರು ನಡೆಸಿದ ನಂತರ 26 ಗುತ್ತಿಗೆದಾರರಿಂದ 6.50 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಈ ಪ್ರಕರಣದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರಿಂದ ವಿಚಾರಣೆ ಬಾಕಿ ಇದೆ. ದಂಡದಿಂದ ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ, 1994 ರ ಕರ್ನಾಟಕ ಮೈನರ್ ಮಿನರಲ್ ರಿಯಾಯಿತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಒಟ್ಟು 72 ಕ್ವಾರಿ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ, ಇದರಲ್ಲಿ ಈಗಾಗಲೇ ದಂಡ ಪಾವತಿಸಿರುವ 26 ಗುತ್ತಿಗೆದಾರರು ಸೇರಿದ್ದಾರೆ. ಉಳಿದ ಗುತ್ತಿಗೆದಾರರು ಸಹ ನೋಟಿಸ್‌ಗಳಿಗೆ ಉತ್ತರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆ ಜಿಲ್ಲೆಯಲ್ಲಿ ಕೆಲವು ಗುತ್ತಿಗೆದಾರರು ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಕಲ್ಲು ಪುಡಿಮಾಡುವುದು ಹಾಗೂ ಗುತ್ತಿಗೆ ಷರತ್ತುಗಳ ಉಲ್ಲಂಘನೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗ ಮಾಡಿಕೊಳ್ಳುವ ಮೂಲಕ ರಾಜ್ಯದ ಖಜಾನೆಗೆ ನಷ್ಟವನ್ನುಂಟುಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ವೀರಪ್ಪ, ಜಿಲ್ಲಾ ಕಾರ್ಯಪಡೆಯೊಂದಿಗೆ ಜುಲೈ 2025 ರಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದರು. ಈ ವೇಳೆ ಗಣಿಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಜಿಲ್ಲೆಯ ಇತರ ಇಲಾಖೆಗಳಲ್ಲಿನ ದುರಾಡಳಿತದ ಬಗ್ಗೆಯೂ ಒಟ್ಟು 13 ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.
ದಂಡ ವಿಧಿಸಿದ ಗುತ್ತಿಗೆದಾರರ ಹೆಸರುಗಳು
ಶಂಕರ್ ಕೆ
ವಿಜಯಲಕ್ಷ್ಮಿ ಚಾಮುಂಡೇಶ್ವರಿ ಸ್ಟೋನ್ ಕ್ರಷರ್
ಜಿಎಂಎಂ ಎಂಟರ್‌ಪ್ರೈಸಸ್ (3 ಲೀಸ್)
ಬಾಲಸುಬ್ರಮಣ್ಯ
ನವಭಾರತ್ ಬಿಲ್ಡಿಂಗ್ ಪ್ರಾಡಕ್ಟ್ಸ್
ರಂಗಸ್ವಾಮಿ
ಟಿ ಜಿ ಸಿದ್ದೇಶ್ (2 ಗುತ್ತಿಗೆ)
ಉಮೇಶ್ ಟಿ ಜಿ
ಕಿರಣ್ ಕುಮಾರ್ ಜಿ ಯು
ಟಿ ಜಿ ಮನೋಜ್ ಕುಮಾರ್, ಶನೇಶ್ವರ ಸ್ವಾಮಿ ಸ್ಟೋನ್ ಕ್ರಷರ್
ಜೆ. ಸ್ಟೋನ್ ಕ್ರಷರ್, ಪ್ರಕಾಶ್ ಎಂ
ಸುಜಾತಾ ಕೆ
ಶ್ರೀಧರ್ ಟಿ ಎನ್
ಮಂಜುನಾಥ
ಚಂದ್ರಪ್ಪ ಎಂ
ವೆಂಕಟೇಶ್ ಬಾಬು ಆರ್
ಪ್ರವೀಣ್ ಕುಮಾರ್
ಶಿವನಾಯ್ಕ್
Advertisement