
ವಿಜಯಪುರ: ಆಗಸ್ಟ್ 19 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಯಾಗದಿದ್ದರೆ 'ಮಾಡು ಇಲ್ಲವೇ ಮಡಿ' ಹೋರಾಟ ಆರಂಭಿಸುತ್ತೇವೆಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಶನಿವಾರ ಹೇಳಿದ್ದಾರೆ.
ಶನಿವಾರ (ಆ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೀಸಲಾತಿ ಸಂಬಂಧ ಹಾವನೂರ ವರದಿ, ಸದಾಶಿವ ವರದಿ, ಕಾಂತರಾಜ ವರದಿ, ಮಾಧುಸ್ವಾಮಿ ವರದಿ ಹಾಗೂ ನಾಗಮೋಹನದಾಸ ವರದಿ ಇದ್ದು, ಎಲ್ಲವೂ ವೈಜ್ಞಾನಿಕವಾಗಿವೆ. ಅದರಲ್ಲೂ, ಮಾಧುಸ್ವಾಮಿ ವರದಿ ಹೊರತುಪಡಿಸಿ ಉಳಿದ ನಾಲ್ಕು ಆಯೋಗಗಳನ್ನೂ ಕಾಂಗ್ರೆಸ್ ನೇಮಕ ಮಾಡಿದೆ. ಎಲ್ಲಾ ವರದಿಗಳ ಮಾಹಿತಿ ಸಹ ಸರ್ಕಾರದಲ್ಲೇ ಇದ್ದು, ಐದರಲ್ಲಿ ಯಾವುದಾರೂ ಒಂದನ್ನು ಜಾರಿ ಮಾಡಿದರೂ, ಅದಕ್ಕೆ ನಮ್ಮ ಸಮ್ಮತಿ ಇದೆ. ಎಲ್ಲಾ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ನ್ಯಾಯ ಒದಗಿಸಲು ವರದಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದರೂ ಅದಕ್ಕೆ ನಮ್ಮ ಯಾವುದೇ ಆಕ್ಷೇಪವಿರುವುದಿಲ್ಲ ಎಂದು ಹೇಳಿದ್ದಾರೆ,
ನ್ಯಾ.ನಾಗಮೋಹನದಾಸ ಅವರು ಜಾತಿಗಳ ಹಿಂದುಳಿಯುವಿಕೆ ಆಧಾರದ ಮೇಲೆ ತಮ್ಮ ವರದಿಯಲ್ಲಿ ಗುಂಪುಗಳನ್ನು ಮಾಡಿದ್ದಾರೆ. ಇದು ವೈಜ್ಞಾನಿಕವಾಗಿದೆ. ಅಸ್ಪೃಶ್ಯರಲ್ಲಿ ಅತಂತ್ಯ ಹಿಂದುಳಿದವರಿಗೆ ಶೇ.1ರಷ್ಟು, ಹೆಚ್ಚು ಹಿಂದುಳಿದ ಮಾದಿಗ ಸಮುದಾಯಕ್ಕೆ ಶೇ.6ರಷ್ಟು, ಹಿಂದುಳಿದ ಹೊಲೆಯ ಸಮುದಾಯಕ್ಕೆ ಶೇ.5ರಷ್ಟು, ಕಡಿಮೆ ಹಿಂದುಳಿದ ಕೊರಮ, ಕೊರಚ ಜನಾಂಗಕ್ಕೆ ಶೇ.4ರಷ್ಟು ಹಾಗೂ ಆದಿ ಆಂಧ್ರ, ಆದಿ ಕರ್ನಾಟಕ ಮತ್ತು ಜಾತಿಯನ್ನೇ ಹೇಳದವರಿಗೆ ಶೇ.1ರಷ್ಟು ಮೀಸಲು ನಿಗದಿ ಮಾಡಿದ್ದಾರೆ. ಈ ವರದಿಯನ್ನು ಸಂವಿಧಾನ ಮತ್ತು 2014ರ ಏಪ್ರಿಲ್ 1ರ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮುಂದಿಟ್ಟುಕೊಂಡು ನೋಡಿದಾಗ ಅರ್ಥವಾಗುತ್ತದೆ.
ಆದರೆ, ರಾಜ್ಯ ಸರ್ಕಾರ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ಜಗಳ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಬಿಡಬೇಕು. ನಾವು ಯಾರಿಗೂ ಅನ್ಯಾಯ ಮಾಡಲು ಹಾಗೂ ತೆಗೆದುಹಾಕಲು ಹೇಳುವುದಿಲ್ಲ. ಸರ್ಕಾರ ತಂದೆ ಸ್ಥಾನದಲ್ಲಿ ನಿಂತು ಅವರವರ ಪಾಲನ್ನು ಕೊಡಬೇಕು. ಒಳ ಮೀಸಲಾತಿಯಿಂದ ಯಾರೂ ವಂಚಿತರಾಗಬಾರದು. ವರದಿಯಲ್ಲಿ ತಿದ್ದುಪಡಿ ಮಾಡುವ ಅವಶ್ಯಕತೆಯಿದ್ದರೆ, ಅದನ್ನಾದರೂ ಮಾಡಿ ಒಳ ಮೀಸಲಾತಿ ಜಾರಿ ಮಾಡಬೇಕು. ನಮ್ಮದು ಯಾವುದೇ ತಕರಾರಿಲ್ಲ.
ಈಗಾಗಲೇ ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಲಾಗಿದೆ. ಆದರೆ, ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ತಮ್ಮದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ನೀಡಿದ ಭರವಸೆಯನ್ನು ಯಾಕೆ ಈಡೇರಿಸುತ್ತಿಲ್ಲ? ನುಡಿದಂತೆ ನಡೆದ ಸರ್ಕಾರ ಅಂದರೆ ಇದೇನಾ? ಆ.16ರಂದೇ ವಿಶೇಷ ಸಚಿವ ಸಂಪುಟ ಸಭೆ ನಿಗದಿ ಮಾಡಿ ಮುಂದೂಡಲು ಕಾರಣವೇನು? ಎಲ್ಲಾ ಜಾತಿಯವರು ರಸ್ತೆಯಲ್ಲಿ ಹೊಡೆದಾಡುಕೊಂಡು ಹೋಗಬೇಕು ಎಂಬ ಕಾಂಗ್ರೆಸ್‌ನ ಒಡೆದು ಆಳುವ ನೀತಿ ಖಂಡನೀಯವಾಗಿದೆ. ಒಳ ಮೀಸಲಾತಿಯು ಮತ ಬ್ಯಾಂಕ್ ರಾಜಕಾರಣಕ್ಕೆ ಅಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದನ್ನು ಜಾರಿ ಮಾಡಬೇಕು. ಮಾಡದಿದ್ದರೆ, ಕಾಂಗ್ರೆಸ್ ಸರ್ಕಾರದ ವಿರುದ್ಧ 'ಮಾಡು ಇಲ್ಲವೇ ಮಡಿ' ಆಂದೋಲನವನ್ನು ಪ್ರಾರಂಭಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಗುಡುಗಿದರು.
Advertisement