
ಬೆಳ್ತಂಗಡಿ: 2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ನಡೆದಿದ್ದ ಆನೆ ಮಾವುತ ಹಾಗೂ ಅವರ ಸಹೋದರಿ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ವಿಶೇಷ ತನಿಖಾ ದಳಕ್ಕೆ(ಎಸ್ಐಟಿ)ಕ್ಕೆ ದೂರು ಸಲ್ಲಿಕೆಯಾಗಿದೆ.
ಆನೆ ಮಾವುತನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಆಗ್ರಹಿಸಿ ಅವರ ಮಕ್ಕಳಾದ ಗಣೇಶ್ ಮತ್ತು ಭಾರತಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ಆ.18ರಂದು ದೂರು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಆನೆ ಮಾವುತನಾಗಿ ಕೆಲಸ ಮಾಡಿ ನಿವೃತ್ತರಾಗಿದ್ದ ನಮ್ಮ ತಂದೆ ನಾರಾಯಣ ಸಫಲ್ಯ ಮತ್ತು ಅತ್ತೆ ಯಮುನಾರನ್ನು 2012ರ ಸೆಪ್ಟಂಬರ್ 21ರಂದು ಬೂರ್ಜೆಯಲ್ಲಿರುವ ಮನೆಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ನಮ್ಮ ತಂದೆ ನಾರಾಯಣ ಅವರ ಹಿರಿಯರ ಕಾಲದಿಂದಲೂ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿರುವ ತನ್ನ ಮನೆಯಲ್ಲಿ ತನ್ನ ಸಹೋದರಿ ಯಮುನಾ ಎಂಬವರೊಂದಿಗೆ ವಾಸ ಮಾಡಿಕೊಂಡಿದ್ದರು. ನಮ್ಮ ತಂದೆ ವಾಸ ಮಾಡಿಕೊಂಡಿದ್ದ ಮನೆಯನ್ನು ತೆರವುಗೊಳಿಸುವಂತೆ ವೀರೇಂದ್ರ ಹೆಗ್ಗಡೆಯವರ ತಮ್ಮ ಹರ್ಷೇಂದ್ರ ಕುಮಾರ್ ಸುಮಾರು 5 ವರ್ಷಗಳಿಂದ ತಂದೆಗೆ ಜೀವ ಬೆದರಿಕೆ ಹಾಕುತ್ತಿದ್ದರು. ನಮ್ಮ ತಂದೆಯ ಮೇಲೆ ಅವರ ಮನೆಯ ಅಂಗಳದಲ್ಲೇ ಎರಡು ಸಲ ಹಲ್ಲೆ ಕೂಡಾ ಮಾಡಿರುತ್ತಾರೆ. ದಿನಾಂಕ 20-09-2012ರಂದು ಸಂಜೆ ಹರ್ಷೇಂದ್ರ ಕುಮಾರ್ ನಮ್ಮ ತಂದೆ ವಾಸವಿದ್ದ ಮನೆಗೆ ಭೇಟಿ ನೀಡಿ ಮನೆಯನ್ನು ಕೂಡಲೇ ತೆರವುಗೊಳಿಸುವಂತೆಯೂ, ತಪ್ಪಿದಲ್ಲಿ ಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು.
ದಿನಾಂಕ 21.09.2012ರಂದು ರಾತ್ರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವದ ಪ್ರಯುಕ್ತ ಆಯೋಜಿಸಿದ್ದ ನಾಟಕ ವೀಕ್ಷಣೆಗೆ ತೆರಳಿದ್ದ ನಮ್ಮ ತಂದೆ ಮತ್ತು ಅತ್ತೆ ಯಮುನಾ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಗೆ ಬಂದಿರುತ್ತಾರೆ ಎಂಬ ಮಾಹಿತಿ ಇದೆ. ಮಾರನೇ ದಿನ ಮಧ್ಯಾಹ್ನ 12 ಗಂಟೆಯ ಸಮಯವಾದರೂ ಮನೆಯ ಬಾಗಿಲು ತೆರೆಯದಿರುವುದನ್ನು ಅರಿತ ಸ್ಥಳೀಯರು, ಮನೆ ಬಾಗಿಲು ತೆಗೆದು ನೋಡಿದಾಗ ನಮ್ಮ ತಂದೆಯ ತಲೆಗೆ ಸೈಝ್ ಕಲ್ಲು ಮತ್ತು ನಮ್ಮ ಅತ್ತೆ ಯಮುನಾರ ತಲೆಗೆ ರುಬ್ಬುವ ಕಲ್ಲನ್ನು ಎತ್ತು ಹಾಕಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು.
ನಮ್ಮ ತಂದೆಯ ಬಳಿ ಯಾವುದೇ ಸಂಪತ್ತು, ಹಣ ಆಭರಣಗಳು ಇದ್ದಿರಲಿಲ್ಲ ಮತ್ತು ಇದ್ದಂತಹ ಅಲ್ಪಸ್ವಲ್ಪ ಹಣ ಮತ್ತು ಆಭರಣಗಳನ್ನು ಸಹ ಕೊಲೆಗಟುಕರು ದೋಚಿರುವುದಿಲ್ಲ. ನಮ್ಮ ತಂದೆಗೆ ಯಾರೂ ವಿರೋಧಿಗಳಿರಲಿಲ್ಲ. ಪೂರ್ವಜರಿಂದ ನಮ್ಮ ತಂದೆ ವಾಸವಾಗಿದ್ದ ಮನೆ ಮತ್ತು ಅಡಿ ಸ್ಥಳವನ್ನು ಸ್ವಾಧೀನ ಪಡಿಸುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ.
ಈ ವಿಷಯವನ್ನು ಮೂರು ದಿನಗಳ ನಂತರ ವೀರೇಂದ್ರ ಹೆಗ್ಗಡೆಯವರನ್ನು ಖುದ್ದು ಬೇಟಿಯಾಗಿ ತಿಳಿಸಿದಾಗ "ಆಗುವುದು ಆಗಿ ಹೋಯ್ತು, ಆ ವಿಷಯವನ್ನು ಬಿಟ್ಟು ಬಿಡಿ" ಎಂದು ತಿಳಿಸಿರುತ್ತಾರೆ. ನಮ್ಮ ತಂದೆಯ ಮನೆಗೆ ಹರ್ಷೇಂದ್ರ ಕುಮಾರ್ ರವರು ಬೀಗ ಜಡಿದು ಮನೆಯಲ್ಲಿದ್ದ ಯಾವುದೇ ವಸ್ತುಗಳನ್ನು ನಮಗೆ ತರಲು ಬಿಟ್ಟಿರುವುದಿಲ್ಲ ಮತ್ತು ಮನೆಗೆ ಪ್ರವೇಶಿಸದಂತೆ ಬೆದರಿಸಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿ ಅಂದಿನ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ನಮ್ಮ ದೂರಿಗೆ ಸೂಕ್ತ ಸ್ಪಂದನ ಸಿಕ್ಕಿರುವುದಿಲ್ಲ.ಘಟನೆ ನಡೆದಾಗ ನಾವು ನಮ್ಮ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದೆವು. ನಮ್ಮ ತಂದೆ ಮತ್ತು ಅತ್ತೆಯ ಕೊಲೆಯ ಪ್ರಕರಣವನ್ನು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ದೂರು ಸ್ವೀಕರಿಸಿರುವ ಎಸ್ಐಟಿ ಅಧಿಕಾರಿಗಳು, ದೂರನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement