
ಬೆಂಗಳೂರು: ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ವಿಧಿವಿಜ್ಞಾನದ ಪ್ರಯೋಗಾಲಯದ (ಎಫ್ ಎಸ್‌ಎಲ್) ವರದಿ ಬರುವವರೆಗೂ ಶವ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಎಸ್ಐಟಿ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೋಮವಾರ ಹೇಳಿದರು.
ವಿಧಾನಸಭೆಯಲ್ಲಿ ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ನಡೆದ ಚರ್ಚೆಗೆ ಸೋಮವಾರ ಸುದೀರ್ಘವಾಗಿ ಉತ್ತರಿಸಿದ ಅವರು, ಎಸ್‌ಐಟಿ ಯಾರದೇ ಒತ್ತಡಕ್ಕೆ ಮಣಿಯದೆ ಬಹಳ ಗಂಭೀರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಇನ್ನೂ ಎಷ್ಟು ಕಡೆ ಅಗೆಯಬೇಕು, ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಎಸ್‌ಐಟಿ ತೀರ್ಮಾನಿಸಲಿದೆ. ಈವರೆಗೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು, ಮಣ್ಣಿನ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಆ ವರದಿ ಇನ್ನೂ ಬಂದಿಲ್ಲ. ಹೀಗಾಗಿ ವರದಿ ಬರುವವರೆಗೂ ವಿಚಾರದಲ್ಲಿ ಮುಂದಕ್ಕೆ ಹೋಗದಿರಲು ಎಸ್ಐಟಿ ತೀರ್ಮಾನಿಸಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ. ತನಿಖೆ ನಡೆಯುವಾಗ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ. ಮಧ್ಯಂತರ ವರದಿ ಇನ್ನೂ ಬಂದಿಲ್ಲ. ಶೀಘ್ರ ಸಂಪೂರ್ಣ ತನಿಖೆ ಮಾಡಿ ಎಂದು ಸರ್ಕಾರ ಎಸ್‌ಐಟಿಗೆ ಹೇಳಬಹುದು. ಆದರೆ, ಎಸ್‌ಐಟಿಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಅಥವಾ ದೂಷಣೆ ಮಾಡಲ್ಲ. ಅದರ ಅಗತ್ಯವೂ ಇಲ್ಲ. ಇದರಲ್ಲಿ ಏನನ್ನೂ ಮುಚ್ಚಿಡುವುದಿಲ್ಲ. ಸರ್ಕಾರಕ್ಕೆ ಬೇರೆ ಯಾವ ಉದ್ದೇಶವೂ ಇಲ್ಲ. ವಸ್ತು ಸ್ಥಿತಿ ಸದನದ ಮುಂದಿಟ್ಟಿದ್ದೇನೆ. ಹೀಗಾಗಿ ವಿಪಕ್ಷ ನಾಯಕರು ಹಾಗೂ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಯಾರದ್ದೋ ಒತ್ತಡಕ್ಕೆ ಮಣಿದು ಸರ್ಕಾರ ಎಸ್‌ಐಟಿ ರಚನೆ ಮಾಡಲಿಲ್ಲ. ಧರ್ಮಸ್ಥಳ ಠಾಣೆ ಪೊಲೀಸರಿಗೆ ತನಿಖೆ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ರಚಿಸಿದ್ದೇವೆ. ಸದ್ಯ ಸಿಕ್ಕಿರುವ ಮೂಳೆಗಳು ಯಾರದು? ಕೊಲೆಯೇ? ಅಸಹಜ ಸಾವೇ? ಸಹಜ ಸಾವೇ ಎಂಬುದು ತನಿಖೆಯಿಂದ ಹೊರಬರಬೇಕು. ಇದರಲ್ಲಿ ಯಾವುದೇ ರೀತಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಧರ್ಮಸ್ಥಳ ಗ್ರಾಮದ ವಿಚಾರ ಇಡೀ ದೇಶದ ಗಮನ ಸೆಳೆಯುತ್ತಿದೆ. ಕಳೆದ ಜು.3ರಂದು ಒಬ್ಬ ವ್ಯಕ್ತಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ನನಗೆ ನಿರಂತರ ಪ್ರಾಣ ಬೆದರಿಕೆ ಹಾಕಿ ಧರ್ಮಸ್ಥಳದಲ್ಲಿ ಹಲವು ಪುರುಷರು, ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಮೃತದೇಹಗಳನ್ನು ಹೂತು ಹಾಕಿಸಿದ್ದಾರೆ. ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾನೆ. ತಮಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೊಡುವಂತೆಯೂ ಕೋರಿದ್ದಾನೆ.
ಅದರಂತೆ ಜು.4ರಂದು ಪೊಲೀಸರು ಎಫ್‌ಐಆ ದಾಖಲಿಸಿದ್ದಾರೆ. ಆತನನ್ನು ಮ್ಯಾಜಿಸ್ಟ್ರೇಟ್ ಬಳಿ ಕರೆದೊಯ್ದು ಬಿಎನ್‌ಎಸ್ಎಸ್ ಕಲಂ183 ಅಡಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ. ಅದರಂತೆ ಧರ್ಮಸ್ಥಳ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಮಾಹಿತಿ ನೀಡಿದರು.
ದೂರುದಾರನನ್ನು ಬಂಧಿಸಿ ಕಸ್ಟಡಿಯಲ್ಲಿಡಲು ಸಾಧ್ಯವಿಲ್ಲ, ಏಕೆಂದರೆ ಪೊಲೀಸರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಆದೇಶವನ್ನು ಅನುಸರಿಸಿ ಸಾಕ್ಷಿ ರಕ್ಷಣಾ ಕಾಯ್ದೆಯ ಪ್ರಕಾರ ಕಾರ್ಯನಿರ್ವಹಿಸಿದ್ದಾರೆ. ಎವಿಡೆನ್ಸ್ ಪ್ರೊಟೆಕ್ಷನ್ ಆ್ಯಕ್ಟ್ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಅನಾಮಿಕ ವ್ಯಕ್ತಿಗೆ ರಕ್ಷಣೆ ನೀಡಲಾಗಿದೆ. ನ್ಯಾಯಾಲಯವೇ ಆ ಅನಾಮಿಕನಿಗೆ 'ವಿ' ಎಂಬ ಹೆಸರು ನೀಡಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮಿತಿ ಸೂಚನೆ ಮೇರೆಗೆ ಆತನಿಗೆ ಮತ್ತು ಆತನ ಕುಟುಂಬಕ್ಕೆ ರಕ್ಷಣೆ ಒದಗಿಸಲಾಗಿದೆ. ಆತನನ್ನು ಪೊಲೀಸರು ಬಂಧಿಸಲು ಅಥವಾ ವಶಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ವಿವರಿಸಿದರು.
ಈ ನಡುವೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕಳೆದ 20 ವರ್ಷಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರು, ವಿದ್ಯಾರ್ಥಿನಿಯರ ಅಸಹಜ ಸಾವು, ಅತ್ಯಾಚಾರ ಕುರಿತು ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದರು. ಬಳಿಕ ನಾನು ಮತ್ತು ಮುಖ್ಯಮಂತ್ರಿಗಳು ಚರ್ಚಿಸಿ ಜು.19ರಂದು ಎಸ್‌ಐಟಿ ರಚಿಸಿ ಆದೇಶಿಸಲಾಗಿತ್ತು.
ಬಳಿಕ ಎಸ್‌ಐಟಿ ತಂಡವು ತನಿಖೆ ಆರಂಭಿಸಿತು. ಅನಾಮಿಕನನ್ನು ಕರೆಸಿ ಸಿಆರ್‌ಪಿಸಿ ಕಲಂ 161 ಅಡಿ ಹೇಳಿಕೆ ದಾಖಲಿಸಿದ್ದರು. ಆತ ತಾನು ಎಲ್ಲೆಲ್ಲಿ ಶವ ಹೂತಿದ್ದೇನೆ ಎಂದು ನೀಡಿದ ಮಾಹಿತಿ ಮೇರೆಗೆ ನಕ್ಷೆ ಸಿದ್ದಪಡಿಸಿಕೊಂಡು ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಆ ವ್ಯಕ್ತಿ ತೋರಿದ ಸ್ಥಳಗಳಲ್ಲಿ ಉತ್ಪನನ ಆರಂಭಿಸಿದ್ದರು ಎಂದು ವಿವರಿಸಿದರು.
ಅನಾಮಿಕ ವ್ಯಕ್ತಿ ಗುರುತಿಸಿದ ಸ್ಥಳ ಪೈಕಿ ಒಂದು ಜಾಗದಲ್ಲಿ ಅಸ್ತಿಪಂಜರ ಸಿಕ್ಕಿದೆ. ಮತ್ತೊಂದರಲ್ಲಿ ಮೂಳೆಗಳು ಸಿಕ್ಕಿವೆ.ಈ ಮೂಳೆಗಳು, ಮಣ್ಣಿನ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಉಳಿದ ಜಾಗದಲ್ಲಿ ಮೂಳೆಗಳು ಸಿಕ್ಕಿಲ್ಲ. ಹೀಗಾಗಿ ಆ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಏಕೆಂದರೆ, ಮಣ್ಣಿನಲ್ಲಿ ಆ್ಯಸಿಡ್ ಅಂಶ ಇದ್ದರೆ ಮೂಳೆಗಳು ಕರಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೀಗಾಗಿ ಪ್ರಯೋಗಾಲಯದಲ್ಲಿ ಈ ಮೂಳೆಗಳು, ಮಣ್ಣುಮಾದರಿ, ಡಿಎನ್‌ಎ, ತಲೆ ಬುರುಡೆಯನ್ನು ವಿಶ್ಲೇಷಣೆಗೊಳಪಡಿಸಬೇಕು. ಹೀಗಾಗಿ ಎಸ್‌ಐಟಿ ವಾಸ್ತವದಲ್ಲಿ ಇನ್ನೂ ತನಿಖೆಗೆ ಇಳಿದಿಲ್ಲ. ಈ ಎಫ್ ಎಸ್‌ಎಲ್ ವರದಿ ಬಂದ ಬಳಿಕ ಅಸಲಿ ತನಿಖೆ ಶುರುವಾಗಲಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮದ್ದು ಬಹಳ ಸೂಕ್ಷ್ಮ ವಿಚಾರ. ಸದ್ಯ ಊಹಾಪೋಹಗಳ ಬಗ್ಗೆ ಚರ್ಚೆಗಳಾಗುತ್ತಿವೆ. ರಾಜ್ಯದ ಜನತೆ ಹಾಗೂ ಕೋಟ್ಯಂತರ ಭಕ್ತಾದಿಗಳು ಬಹಳ ಆತಂಕದಲ್ಲಿದ್ದಾರೆ. ಹೀಗಾಗಿ ಸರ್ಕಾರ ಬಹಳ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳುತ್ತಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ತಾಣಗಳಲ್ಲಿ ವಿಚಾರಗಳು ಬದಲಾಗುತ್ತಿವೆ. ಇದು ಆಗಬಾರದು. ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರು ಆರಂಭದಲ್ಲಿ ಎಸ್‌ಐಟಿ ಸ್ವಾಗತಿಸಿದ್ದರು. ಈಗ ಏಕಾಏಕಿ ಗಂಭೀರವಾಗಿ ತೆಗೆದು ಕೊಂಡು ವ್ಯಾಖ್ಯಾನ ಮಾಡುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ತನಿಖೆ ಸರಿಯಾಗಿ ಆಗಬೇಕು. ಸತ್ಯಾಂಶ ಬರಬೇಕು. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆರೋಪ ಸುಳ್ಳು ಎಂದಾದರೆ, ಧರ್ಮಸ್ಥಳದ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಭಕ್ತಾದಿಗಳ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರ ಬರಲಿದೆ. ಸಂತ್ರಸ್ತರ ಕುಟುಂಬಕ್ಕೂನ್ಯಾಯ ಸಿಗಲಿದೆ.
ಇದರಲ್ಲಿ ರಾಜಕೀಯ ಬೆರೆಸುವುದು, ಧರ್ಮದ ಹೆಸರಿನಲ್ಲಿ ಗದ್ದಲ ಮಾಡುವುದು ಸರಿಯಲ್ಲ. ಸತ್ಯ ಹೊರಗೆ ಬಂದಾಗ ನಾವು, ನೀವು ಧರ್ಮಸ್ಥಳದ ಜನ ಸಮೂಹ ಎಲ್ಲರೂ ಒಪ್ಪಲೇಬೇಕು. ಹೀಗಾಗಿ ಇದನ್ನು ಬೇರೆ ರೀತಿ ಅರ್ಥೈಸುವುದು ಸರಿಯಲ್ಲ ಎಂದು ತಿಳಿಸಿದರು.
ಈ ನಡುವೆ ಗೃಹ ಸಚಿವ ಉತ್ತರದಿಂದ ತೃಪ್ತರಾಗದ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಎಸ್ಐಟಿ ತನಿಖೆಯನ್ನು ವಿರೋಧಿಸುವುದಿಲ್ಲ. ಆದರೆ, ಧರ್ಮಸ್ಥಳದ ಪ್ರತಿಷ್ಠೆಗೆ ಹಾನಿ ಮಾಡಲು ಸಂಚು ರೂಪಿಸಿದವರ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಪ್ರಗತಿಪರ ಚಿಂತಕರು ಮತ್ತು ನಗರ ನಕ್ಸಲರು ಎಸ್‌ಐಟಿ ಸ್ಥಾಪಿಸುವಂತೆ ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಧರ್ಮಸ್ಥಳದ ವಿರುದ್ಧದ ಸುಳ್ಳು ಪ್ರಚಾರವನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.
Advertisement