
ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಅತಿಯಾದ ಔಷಧ ಸೇವನೆ ಸಾವಿಗೆ ಕಾರಣ ಎಂದು ಹೇಳಲಾಗಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಐಎಂಎಸ್) ಸ್ನಾತಕೋತ್ತರ ವಿದ್ಯಾರ್ಥಿನಿ ಸೋಮವಾರ ರಾತ್ರಿ ಖಿನ್ನತೆಗೆ ತೆಗೆದುಕೊಳ್ಳುವು ಔಷಧಿಯನ್ನು ಅತಿಯಾದ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಂಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತಳನ್ನು ಬೆಂಗಳೂರಿನ ಮೂಲದ ಡಾ. ಪ್ರಿಯಾ ಕಾರ್ತಿಕ್ (27) ಎಂದು ಗುರುತಿಸಲಾಗಿದ್ದು, ಆಕೆ ಬೆಳಗಾವಿಯ ಬಿಐಎಂಎಸ್‌ನಲ್ಲಿ ಮನೋವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಈ ಕುರಿತು ಮಾಹಿತಿ ನೀಡಿದ ಅವರು, "6.30ಕ್ಕೆ ಆಸ್ಪತ್ರೆಯಲ್ಲಿ ಡ್ಯೂಟಿ ಮುಗಿಸಿ ವಿದ್ಯಾರ್ಥಿನಿ ತನ್ನ ರೂಮಿಗೆ ಹೋಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿಯಿತು. ಮೇಲ್ನೋಟಕ್ಕೆ ಯಾವುದೋ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ. ಪೊಲೀಸರು ತನಿಖೆ ನಡೆಸಲಿದ್ದಾರೆ" ಎಂದರು.
"ಮಾನಸಿಕ ಕಾಯಿಲೆಯಿಂದ ವಿದ್ಯಾರ್ಥಿನಿ ಬಳಲುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಹಿಂದೆ ಒಮ್ಮೆ ಕೈ ಕತ್ತರಿಸಿಕೊಂಡು (ಮಣಿಕಟ್ಟು) ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು" ಎಂದು ತಿಳಿಸಿದರು.
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement