ಮೈಶುಗರ್ಸ್'ನಲ್ಲಿ 140 ಕೋಟಿ ರೂ ಅನುದಾನ ದುರ್ಬಳಕೆ: ತನಿಖೆಗೆ ರಾಜ್ಯ ಸರ್ಕಾರ ಮುಂದು

ಆಡಳಿತ ನಡೆಸಿದ್ದ ಹಲವು ಪಕ್ಷಗಳ ಸರ್ಕಾರಗಳು ಮೈಶುಗರ್ಸ್‌ ಕಾರ್ಖಾನೆಗೆ ಈವರೆಗೆ ರೂ.650 ಕೋಟಿಗೂ ಹೆಚ್ಚು ಅನುದಾನ ನೀಡಿವೆ. ಆ ವೆಚ್ಚದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಹುದಿತ್ತು.
Shivanand Patil
ಸಚಿವ ಶಿವಾನಂದ ಪಾಟೀಲ್
Updated on

ಬೆಂಗಳೂರು: ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆಂದು ಬಿಡುಗಡೆ ಮಾಡಿದ್ದ 140 ಕೋಟಿ ರೂ ಅನುದಾನ ದುರ್ಬಳಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಧಾನ ಪರಿಷತ್ತಿನ ಕಲಾಪದಲ್ಲಿ ಮಂಗಳವಾರ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವ ಶಿವಾನಂದ ಪಾಟೀಲ್‌ ಅವರು ಉತ್ತರಿಸಿದರು.

ಆಡಳಿತ ನಡೆಸಿದ್ದ ಹಲವು ಪಕ್ಷಗಳ ಸರ್ಕಾರಗಳು ಮೈಶುಗರ್ಸ್‌ ಕಾರ್ಖಾನೆಗೆ ಈವರೆಗೆ ರೂ.650 ಕೋಟಿಗೂ ಹೆಚ್ಚು ಅನುದಾನ ನೀಡಿವೆ. ಆ ವೆಚ್ಚದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಹುದಿತ್ತು. ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ್ದರೂ, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಂಡಿಲ್ಲ. ಹೀಗಾಗಿ ಅನುದಾನ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಬಂದ ನಂತರ ಕಾರ್ಖಾನೆ ಅಭಿವೃದ್ಧಿಗೆ ಕೈಗೊಂಡ ವಿವಿಧ ಕ್ರಮಗಳಿಂದಾಗಿ ಪ್ರತಿಶತ 3.5ರಷ್ಟಿದ್ದ ಸಕ್ಕರೆ ಇಳುವರಿ ಪ್ರಮಾಣ ಈಗ ಶೇ.8ಕ್ಕೆ ಏರಿಕೆಯಾಗಿದೆ. ಸಹ ವಿದ್ಯುತ್‌ ಘಟಕವನ್ನು ಸಹ ಆರಂಭಿಸಲಾಗಿದೆ. 2023-24ನೇ ಸಾಲಿನಲ್ಲಿ 12.21 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಿದ್ದು, ಈ ಪೈಕಿ 7.28 ಲಕ್ಷ ಯೂನಿಟ್‌ಗಳನ್ನು ಕಾರ್ಖಾನೆಗೆ ಬಳಸಿಕೊಳ್ಳಲಾಗಿದೆ. 4.93 ಲಕ್ಷ ಯೂನಿಟ್‌ ವಿದ್ಯುತ್‌ ಅನ್ನು ಚೆಸ್ಕಾಂಗೆ ಮಾರಾಟ ಮಾಡಿ 29.14 ಲಕ್ಷ ರು. ಆದಾಯ ಗಳಿಸಲಾಗಿದೆ.

Shivanand Patil
ಮೈಶುಗರ್ 52 ಕೋಟಿ ರೂ ವಿದ್ಯುತ್ ಬಿಲ್ ಮನ್ನಾ ಮಾಡಿದ ರಾಜ್ಯ ಸರ್ಕಾರ..!

2024-25ನೇ ಸಾಲಿನಲ್ಲಿ 1,57,30,000 ಯೂನಿಟ್‌ ಉತ್ಪಾದಿಸಲಾಗಿದೆ. ಈ ಪೈಕಿ 71,83,440 ಯೂನಿಟ್‌ ವಿದ್ಯುತ್‌ ಅನ್ನು ಚೆಸ್ಕಾಂಗೆ 4,33,87,977 ರು.ಗೆ ಮಾರಾಟ ಮಾಡಲಾಗಿದೆ. ಈ ಮೊತ್ತವನ್ನು ಚೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್‌ ಬಿಲ್‌ ಬಾಕಿಗೆ ಹೊಂದಾಣಿಕೆ ಮಾಡಲಾಗಿದೆ ಎಂದರು.

ಮೈಶುಗರ್ಸ್ 235.10 ಎಕರೆ ಭೂಮಿಯನ್ನು ಹೊಂದಿದೆ. ಅತಿಕ್ರಮಣದ ವ್ಯಾಪ್ತಿಯನ್ನು ನಿರ್ಧರಿಸಲು ಸಮೀಕ್ಷೆಯನ್ನು ನಡೆಸಲಾಗುವುದು, ಬಳಿಕ ಅದಕ್ಕೆ ಅನುಗುಣವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮೊದಲು ಕಲಬುರಗಿಯಲ್ಲಿರುವ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ಸ್ ಮತ್ತು ಅಪ್ಯಾರಲ್ ಪಿಎಂ ಮಿತ್ರ ಟೆಕ್ಸ್‌ಟೈಲ್ ಪಾರ್ಕ್ ಯೋಜನೆಯ ಕುರಿತು ಸಚಿವರು ಮಾತನಾಡಿದರು. ಯೋಜನೆಯು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಯಲ್ಲಿ ಸಿದ್ಧ ಉಡುಪುಗಳಿಗೆ ನೂಲು ಉತ್ಪಾದಿಸುವ ಕೈಗಾರಿಕೆಗಳು ಇರುತ್ತವೆ. ಯೋಜನೆಯು ಸುಮಾರು ಒಂದು ಲಕ್ಷ ಉದ್ಯೋಗಗಳು ಸೃಷ್ಟಿಸಲಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ 390 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com