
ಬೆಂಗಳೂರು: ಗುರುವಾರ ಕರ್ನಾಟಕದ ಹಲವಾರು ಭಾಗಗಳಲ್ಲಿ ನಿರಂತರ ಮಳೆಯಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿ ಅನೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾವಾಡ, ಗದಗ, ದಾವಣಗೆರೆ, ಹಾವೇರಿ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗಿದ್ದು, ಮನೆಗಳು ಮತ್ತು ಕೃಷಿಭೂಮಿಗೆ ಹಾನಿಯಾಗಿದೆ.
ಮಹಾರಾಷ್ಟ್ರದ ಪ್ರವಾಹದಿಂದ ಭಾರಿ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇತ್ತ ಯಾದಗಿರಿಯಲ್ಲಿ, ನಾರಾಯಣಪುರದ ಬಸವಸಾಗರ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿರುವುದರಿಂದ ಕೃಷ್ಣಾ ನದಿ ಜಲಾನಯನ ಪ್ರದೇಶದ ಹಳ್ಳಿಗಳು ಪ್ರವಾಹ ಭೀತಿ ಎದುರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
30 ಕ್ರೆಸ್ಟ್ ಗೇಟ್‌ಗಳನ್ನು ತೆರೆಯುವ ಮೂಲಕ ಅಣೆಕಟ್ಟಿನಿಂದ 2.8 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಕೃಷ್ಣಾ ನದಿಗೆ ವ್ಯಾಪಿಸಿರುವ ಯಾದಗಿರಿಯ ಕೊಲ್ಲೂರು ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಪೊಲೀಸರು ಆ ಪ್ರದೇಶದಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ಮಳೆಯಾಗುವ ವೇಳೆ ಸೇತುವೆ ಮುಳುಗಡೆಯಾಗುತ್ತಲೇ ಇರುವುದರಿಂದ ಗ್ರಾಮಸ್ಥರು ಎತ್ತರದ ಸೇತುವೆ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ, ನಾರಾಯಣಪುರ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿರುವುದರಿಂದ ಹೂವಿನಹಡಗಲಿ ಸೇತುವೆ ಮುಳುಗಡೆಯಾಗಿದ್ದು, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಅಂಜಲ್, ಅಂಚೆಸೂಗೂರು, ಹೂವಿನಹಡಗಿ, ಜೋಳಧಡಗಿ, ಮೈದರ್ಗೋಳ್, ಕರ್ಕಿಹಳ್ಳಿ, ಕೊಂಚಪ್ಲಿ, ಅಪ್ಪ್ರಾಲ್ ಮತ್ತು ಬಸವಂತಪುರ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ಹೂವಿನಹಡಗಿ ಬಳಿಯ ಗದ್ದೆಗುಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ನದಿ ದಂಡೆಗಳಿಗೆ ಹೋಗದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ ಮತ್ತು ಪ್ರವಾಹದ ನೀರನ್ನು ವೀಕ್ಷಿಸಲು ಜನರು ಸೇರುತ್ತಿರುವುದರಿಂದ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ಆಗಸ್ಟ್ 1 ರಿಂದ 21 ರವರೆಗೆ ರಾಜ್ಯದಲ್ಲಿ ಸಾಮಾನ್ಯ ಮಳೆಯಾದ 164 ಮಿಮೀ ಬದಲಿಗೆ 190 ಮಿಮೀ ಮಳೆಯಾಗಿದೆ. ಇದು "ಸಾಮಾನ್ಯ" ಎಂದು ವರ್ಗೀಕರಿಸಿದ್ದಕ್ಕಿಂದ ಶೇ 16 ರಷ್ಟು ಹೆಚ್ಚುವರಿಯಾಗಿದೆ.
ವಿಜಯಪುರ, ಗದಗ, ತುಮಕೂರು, ಬಾಗಲಕೋಟೆ, ದಾವಣಗೆರೆ, ಮಂಡ್ಯ, ಕೊಪ್ಪಳ, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದರೆ, ಭಟ್ಕಳದಲ್ಲಿ 77 ಮಿಮೀ ಸೇರಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 20 ರಿಂದ 21 ರವರೆಗೆ ಭಾರಿ ಮಳೆಯಾಗಿದೆ.
ಭಾರಿ ಮಳೆ ಸಾಧ್ಯತೆ
ಮುಂದಿನ ಆರು ದಿನಗಳ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಆಗಸ್ಟ್ 25 ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಆಗಸ್ಟ್ 26 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರಗಿ ಮತ್ತು ಯಾದಗಿರಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಹಲವಾರು ಜಲಾಶಯಗಳ ನೀರಿನ ಮಟ್ಟ
ಗುರುವಾರದ ವೇಳೆಗೆ, ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟವು 123.08 ಟಿಎಂಸಿ, ತುಂಗಭದ್ರಾ ಅಣೆಕಟ್ಟಿನಲ್ಲಿ 78.80 ಟಿಎಂಸಿ (ಸಾಮರ್ಥ್ಯ 105.79 ಟಿಎಂಸಿ), ಕೆಆರ್‌ಎಸ್‌ನಲ್ಲಿ 47.84 ಟಿಎಂಸಿ (49.45 ಟಿಎಂಸಿ) ಮತ್ತು ನಾರಾಯಣಪುರದಲ್ಲಿ 32.98 ಟಿಎಂಸಿ (33.31 ಟಿಎಂಸಿ ಸಾಮರ್ಥ್ಯ) ಎಂದು ಮೇಲ್ವಿಚಾರಣಾ ಕೇಂದ್ರ ವರದಿ ಮಾಡಿದೆ.
Advertisement