
ಬೆಂಗಳೂರು: ನಾವು ಯಾರ (ಧರ್ಮಸ್ಥಳ) ಪರವೂ ಇಲ್ಲ, ನ್ಯಾಯದ ಪರವಷ್ಟೇ. ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನ ಬಂಧನವಾಗಿದೆ. ಈ ಪ್ರಕರಣದ ಬಗ್ಗೆ ಬಿಜೆಪಿಯವರು ಏನೂ ಮಾತಾಡಿರಲಿಲ್ಲ. ಬಿಜೆಪಿಯವರು ಅಡ್ಡಗೋಡೆ ಮೇಲೆ ದೀಪ ಇಡುವ ಕೆಲಸ ಮಾಡ್ತಿದ್ರು. ಷಡ್ಯಂತ್ರದ ಕುರಿತು ನಾನದನ್ನು ಪ್ರಸ್ತಾವನೆ ಮಾಡಿದ ಮೇಲೆ ಅವರು ಮಾತನಾಡಿದ್ದಾರೆಂದು ಹೇಳಿದರು.
ಎಸ್‌ಐಟಿ ತನಿಖೆಯನ್ನು ಧರ್ಮಸ್ಥಳದ ಕುಟುಂಬದವರೇ ಸ್ವಾಗತಿಸಿದ್ದಾರೆ. ಸ್ವತಃ ಅವರ ಕುಟುಂಬದವರೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾರೆ. ಇನ್ನು ಇದನ್ನು ಅಧಿವೇಶನದಲ್ಲಿ ಬಾಲಕೃಷ್ಣ ಅವರು ಮಾತನಾಡಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಯಾರ್ಯಾರ ತಪ್ಪಿದೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ, ಗೃಹ ಸಚಿವರು, ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ಕೆಲಸ ನಾವು ಮಾಡುತ್ತಿದ್ದೇವೆ. ಎಸ್‌ಐಟಿ ತನಿಖೆ ನಡೆಯುತ್ತಿದೆ. ನಾವು ನ್ಯಾಯದ ಪರ. ಅವರ ಪರನೂ ಅಲ್ಲ, ಇವರ ಪರನೂ ಅಲ್ಲ. ಆದರೆ, ಧರ್ಮದ ರಾಜಕಾರಣ ಮಾಡಬೇಡಿ ಎಂದರು.
ಅನನ್ಯಾ ಭಟ್ ನನ್ನ ಮಗಳೇ ಅಲ್ಲ ಎಂದು ಸುಜಾತ ಭಟ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದನ್ನು ಗೃಹಸಚಿವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಸುರ್ಜೇವಾಲ ಅವರ ಜೊತೆಗಿನ ಸಭೆಯ ಬಗ್ಗೆ ಮತನಾಡಿ, 'ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಬೇಕಲ್ಲವೇ? ಆದ ಕಾರಣ ಸಭೆ ಕರೆದು ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದೇವೆ. ನ್ಯಾಯಾಲಯ ಚುನಾವಣೆ ನಡೆಸಿ ಎಂದ ಮೇಲೆ ಕಡೆಗಣಿಸಬಾರದಲ್ಲವೇ? ಎಂದರು.
Advertisement