ರಾಜ್ಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚೆ: ಸ್ಪೀಕರ್ ಯು.ಟಿ ಖಾದರ್

ಇತ್ತೀಚೆಗೆ ನಡೆದ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಆರಂಭಿಸಲಾದ ರಾಜ್ಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತ ವಿಶೇಷ ಚರ್ಚೆ ಮುಂದಿನ ಜಂಟಿ ಅಧಿವೇಶನದಲ್ಲಿ ಮುಂದುವರಿಯಲಿದೆ.
Assembly Session (file image)
ವಿಧಾನಸಭೆ ಅಧಿವೇಶನ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಸರಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ಪ್ರಾರಂಭಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಮುಂದುವರೆಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಶನಿವಾರ ಹೇಳಿದರು.

ವಿಧಾನಸಭೆ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗೆ ನಡೆದ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಆರಂಭಿಸಲಾದ ರಾಜ್ಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತ ವಿಶೇಷ ಚರ್ಚೆ ಮುಂದಿನ ಜಂಟಿ ಅಧಿವೇಶನದಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.

ಅಲ್ಲದೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿರೋಧ ಪಕ್ಷಗಳ ಶಾಸಕರಿಂದ, ವಿಶೇಷವಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದ ಸಲಹೆಗಳನ್ನು ಪಡೆಯುವುದಾಗಿ ಹೇಳಿದರು.

ಈ ನಡುವೆ ಕಾರ್ಯಕಲಾಪ ಕುರಿತು ಮಾಹಿತಿ ನೀಡಿದ ಸ್ಪೀಕರ್ ಯುಟಿ.ಖಾದರ್ ಅವರು, ಅಧಿವೇಶನದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ, ಆರ್‍ಸಿಬಿ ಸಂಭ್ರಮಾಚಾರಣೆಯ ಕಾಲ್ತುಳಿತದಲ್ಲಿ ನಿಧನ ಹೊಂದಿದವರಿಗೆ, ಪಹಲ್ಗಾಮ್‍ನಲ್ಲಿ ಉಗ್ರರ ದಾಳಿಯಲ್ಲಿ ನಿಧನ ಹೊಂದಿದವರಿಗೆ ಹಾಗೂ ಏರ್ ಇಂಡಿಯಾ ವಿಮಾನ ದುರಂತದಲ್ಲಿ ನಿಧನ ಹೊಂದಿದವರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ ಎಂದು ಹೇಳಿದರು.

18 ಬಿಜೆಪಿ ಸದಸ್ಯರನ್ನು ಆರು ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆ ಹಿಡಿದು ಅಮಾನತ್ತುಗೊಳಿಸಿದ್ದ ನಿರ್ಣಯವನ್ನು ಮೇ 25ರಿಂದ ಜಾರಿಗೆ ಬರುವಂತೆ ಹಿಂಪಡೆದಿರುವ ಕುರಿತಾದ ಸ್ಥಿರೀಕರಣ ಪ್ರಸ್ತಾವಕ್ಕೆ ಸದನ ಅನುಮೋದನೆ ನೀಡಿದೆ. ರಾಷ್ಟ್ರಪತಿ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯ ವರದಿಯನ್ನು ಮಂಡಿಸಲಾಗಿದೆ.

2025-26ನೆ ಸಾಲಿನ ಪೂರಕ ಅಂದಾಜುಗಳ ಮೊದಲನೆ ಕಂತನ್ನು ಅಂಗೀಕರಿಸಲಾಗಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಆರು ವರದಿಗಳನ್ನು ಮಂಡಿಸಲಾಗಿದೆ. ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 39 ವಿಧೇಯಕಗಳನ್ನು ಮಂಡಿಸಲಾಗಿದ್ದು, 37 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

Assembly Session (file image)
ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ಶಿಕ್ಷಕರು ತೊಳಿಬೇಕಾ?: ಮೇಲ್ಮನೆಯಲ್ಲಿ ಸರ್ಕಾರದ ವಿರುದ್ಧ ಸದಸ್ಯರ ಆಕ್ರೋಶ; Video

2025ನೆ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಮತ್ತು ಕರ್ನಾಟಕ ಭೂ ಕಂದಾಯ(ಎರಡನೆ ತಿದ್ದುಪಡಿ) ವಿಧೇಯಕವನ್ನು ಪರಿಶೀಲಿಸಿ, ವರದಿ ನೀಡಲು ವಿಧಾನಸಭೆಯ ಪರಿಶೀಲನಾ ಸಮಿತಿಗೆ ಒಪ್ಪಿಸಲು ತೀರ್ಮಾನಿಸಲಾಯಿತು. ವಿಧಾನಪರಿಷತ್ತಿನಿಂದ ತಿರಸ್ಕೃತವಾದ ರೂಪದಲ್ಲಿರುವ 2025ನೆ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ.

2024ನೆ ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕ ಹಾಗೂ ನೋಂದಣಿ(ಕರ್ನಾಟಕ ತಿದ್ದುಪಡಿ) ವಿಧೇಯಕಗಳನ್ನು ಹಿಂಪಡೆಯಲಾಗಿದೆ. ನಿಯಮ 60ರಡಿಯಲ್ಲಿ ನೀಡಿದ್ದ 3 ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದು ಸೇರಿದಂತೆ ಒಟ್ಟು 7 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ವಿಧಾನಮಂಡಲದ ಹಾಗೂ ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳ 7 ವರದಿಗಳು, 35 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. 21 ಅಧಿಸೂಚನೆಗಳು, 4 ಅಧ್ಯಾದೇಶಗಳು, 142 ವಾರ್ಷಿಕ ವರದಿಗಳು, 169 ಲೆಕ್ಕಪರಿಶೋಧನಾ ವರದಿಗಳು, 1 ಲೆಕ್ಕ ತಪಾಸಣಾ ವರದಿ, 5 ಅನುಪಾಲನ ವರದಿಗಳು, 6 ಅನುಸರಣಾ ವರದಿಗಳು ಹಾಗೂ 1 ವಿಶೇಷ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ.

Assembly Session (file image)
ಕೇರಳಕ್ಕೆ ಸಾಧ್ಯವಾಗುವುದಾದರೆ ನಮಗ್ಯಾಕಾಗೋಲ್ಲ: ಸರ್ಕಾರಿ ಶಾಲೆಗಳ ತುರ್ತು ಸುಧಾರಣೆಗೆ ಶಾಸಕ ಸುರೇಶ್ ಕುಮಾರ್ ಕರೆ

ಒಟ್ಟು 2306 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 2199 ಪ್ರಶ್ನೆಗಳು ಅಂಗೀಕೃತಗೊಂಡಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 128 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2064 ಪ್ರಶ್ನೆಗಳ ಪೈಕಿ 1662 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351ರಡಿಯಲ್ಲಿ 220 ಸೂಚನೆಗಳ ಪೈಕಿ 180 ಸೂಚನೆಗಳನ್ನು ಪಟ್ಟಿಯಲ್ಲಿ ತೆಗೆದುಕೊಳ್ಳಲಾಗಿದ್ದು, 90 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ.

ಗಮನ ಸೆಳೆಯುವ 383 ಸೂಚನೆಗಳ ಪೈಕಿ 178 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 166 ಸೂಚನೆಗಳನ್ನು ಸದನದಲ್ಲಿ ಚರ್ಚಿಸಲಾಗಿದೆ. ಶೂನ್ಯವೇಳೆಯಲ್ಲಿ ಒಟ್ಟು 13 ಸೂಚನೆಗಳನ್ನು ಚರ್ಚಿಸಲಾಗಿದೆ. ಒಂದು ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಲಾಗಿದ್ದು, ತನಿಖೆ, ಪರಿಶೀಲನೆ ಮತ್ತು ವರದಿಗಾಗಿ ಹಕ್ಕುಬಾಧ್ಯತೆಗಳ ಸಮಿತಿಗೆ ವಹಿಸಲಾಗಿದೆ.

ಶಾಂತಿ ಮತ್ತು ಯುದ್ಧ ನಿಲುಗಡೆ ಘೋಷಣೆಯಲ್ಲಿ ಪ್ರತಿಪಾದಿಸಲಾದ ತತ್ವಗಳು ಮತ್ತು ಲೇಖನಗಳಿಗೆ ಸಂಪೂರ್ಣ ಬೆಂಬಲ ಘೋಷಿಸುವ ಹಾಗೂ ಮಾನವ ಅಂಗಾಂಗ ಕಸಿ(ತಿದ್ದುಪಡಿ) ಕೇಂದ್ರ ಸರಕಾರದ ಅಧಿನಿಯಮ, 2011 ಅನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಅಧಿಕೃತ ನಿರ್ಣಯಗಳನ್ನು ಸದನದಲ್ಲಿ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com