
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭಗಳಿಸಬಹುದೆಂಬ ಆಮಿಷವೊಡ್ಡಿ ಕುಟುಂಬವೊಂದಕ್ಕೆ 4.25 ಕೋಟಿ ರೂ.ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುಟುಂಬದ ಸ್ನೇಹಿತರೊಬ್ಬರು ಶೇ. 35 ರಷ್ಟು ಲಾಭದ ಆಸೆ ತೋರಿಸಿ 48 ವರ್ಷದ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವಂತೆ ಹೇಳಿ ಸುಮಾರು 4.25 ಕೋಟಿ ಹಣವನ್ನು ವಂಚಿಸಿದ್ದಾರೆ.
ಶಂಕರ್ (ಹೆಸರು ಬದಲಾಯಿಸಲಾಗಿದೆ) ಸಲ್ಲಿಸಿದ ದೂರಿನ ಪ್ರಕಾರ, ಕುಟುಂಬಕ್ಕೆ ಪರಿಚಿತರಾಗಿರುವ ಹರಿ ಸುಬ್ರಮಣ್ಯಂ ಅವರು ತಮ್ಮೊಂದಿಗೆ ಷೇರು ಮಾರುಕಟ್ಟೆ ಹೂಡಿಕೆಗಳ ಬಗ್ಗೆ ಆಗಾಗ್ಗೆ ಚರ್ಚಿಸುತ್ತಿದ್ದರು. ಅವರು ದೂರುದಾರರನ್ನು ಗ್ಲೋಬ್ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದರು. ದೆಹಲಿ ಮೂಲದ ಬ್ರೋಕರೇಜ್ ಸಂಸ್ಥೆಗೆ ಸಂಬಂಧಿಸಿದ ಸಬ್-ಬ್ರೋಕರ್ ಎಂದು ಹೇಳಿಕೊಂಡ ರಾಂಪ್ರಸಾದ್ ಅಶ್ವಿನ್ ಎಂಬುವರನ್ನು ಪರಿಚಯಿಸಿದರು.
ಈ ಇಬ್ಬರು ವಾರ್ಷಿಕವಾಗಿ ಅಥವಾ ಮಾಸಿಕವಾಗಿ ಶೇ. 35–36 ರಷ್ಟು ಸ್ಥಿರ ಆದಾಯದ ಭರವಸೆ ನೀಡಿ ಶಂಕರ್ ಕುಟುಂಬಕ್ಕೆ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದರು. ಶಂಕರ್ ಮೊದಲು ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್‌ನ ಖಾತೆಗೆ 1.25 ಕೋಟಿ ರೂ.ಗಳನ್ನು ವರ್ಗಾಯಿಸಿದರು, ನಂತರ ಅವರ ಕುಟುಂಬ ಸದಸ್ಯರು ಹೆಚ್ಚುವರಿಯಾಗಿ 3 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದರು.
ಆರೋಪಿಗಳು ತಮ್ಮ ಡಿಮ್ಯಾಟ್ ಖಾತೆಗಳು, ಲಾಗಿನ್ ರುಜುವಾತುಗಳು ಮತ್ತು ಒಟಿಪಿಗಳ ವಿವರಗಳನ್ನು ಸಂಗ್ರಹಿಸಿ, ಅವರಿಗೆ ತಿಳಿಯದೆ ಅನಧಿಕೃತ ವಹಿವಾಟುಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ವಂಚನೆ 2021 ರಲ್ಲಿ ನಡೆದಿದ್ದು, ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement