
ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದೂರುದಾರ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದು, ಈತನ ಕುರಿತು ಮಾಹಿತಿ ಸಂಗ್ರಹಿಸಲು ಮಂಡ್ಯ ಹಾಗೂ ತಮಿಳುನಾಡಿಗೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಸಾಕ್ಷಿ ಹಾಗೂ ದೂರುದಾರ ವ್ಯಕ್ತಿ ಮಂಡ್ಯ ಹಾಗೂ ತಮಿಳುನಾಡಿನಲ್ಲಿ ವಾಸವಿದ್ದ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡ ಮಂಡ್ಯ ಮತ್ತು ತಮಿಳುನಾಡಿಗೆ ಭೇಟಿ ನೀಡಿ, ಈತನ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಈತನ್ಮಧ್ಯೆ ಸುಳ್ಳು ಹೇಳಿಕೆಗಳ ನೀಡಿ ವಿಡಿಯೋ ಪಸರಿಸಿದ್ದ ಯೂಟ್ಯೂಬರ್ ಸಮೀರ್ ಎಂಡಿ ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ, ಹೇಳಿಕೆ ದಾಖಲಿಸಿದ್ದಾನೆಂದು ತಿಳಿದುಬಂದಿದೆ.
ಇದಕ್ಕೂ ಮೊದಲು, ಧರ್ಮಸ್ಥಳ ಪೊಲೀಸರು ಸಮೀರ್ ವಿರುದ್ಧ ನಕಲಿ ಸುದ್ದಿ ಮತ್ತು ಪ್ರಕರಣದಲ್ಲಿ ಸಾಕ್ಷಿ-ದೂರುದಾರರ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಬಂಧನ ವಾರಂಟ್ ಹೊರಡಿಸಿದ್ದರು, ನಂತರ, ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಸಮೀರ್ ಯಶಸ್ವಿಯಾಗಿದ್ದ.
ಸಮೀರ್ ತನ್ನ ‘ಧೂತ’ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಸಂಚಲನಾತ್ಮಕ ಆರೋಪಗಳನ್ನು ಮಾಡಿ, AI ತಂತ್ರಜ್ಞಾನದಿಂದ ರಚಿಸಿದ ವಿಡಿಯೋವನ್ನು ಪ್ರಕಟಿಸಿದ್ದ.
ಈ ವಿಡಿಯೋದಲ್ಲಿ ‘ಅನನ್ಯಾ ಭಟ್’ ಎಂಬ ಕಾಲ್ಪನಿಕ ಯುವತಿಯನ್ನು ಸೃಷ್ಟಿಸಿ, ಭಕ್ತರ ಭಾವನೆಗೆ ಧಕ್ಕೆ ತರುವಂತಹ ಆರೋಪಗಳನ್ನು ಮಾಡಲಾಗಿತ್ತು. ಇದರಿಂದ ಧರ್ಮಸ್ಥಳದಲ್ಲಿ ದೊಂಬಿಯಂತಹ ಸನ್ನಿವೇಶ ಸೃಷ್ಟಿಯಾಗುವಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಮೀರ್‌ನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಿದ ನಂತರ ಧರ್ಮಸ್ಥಳ ಪಿಎಸ್ಐ ಸಮರ್ಥ ಆರ್. ಗಾಣಿಗೇರ ಜುಲೈ 12 ರಂದು ದೂರು ದಾಖಲಿಸಿದ್ದರು.
ನಂತರ, ಧರ್ಮಸ್ಥಳ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 240 (ತಪ್ಪು ಮಾಹಿತಿ), 192 (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ), ಮತ್ತು 353(1)(ಬಿ) (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡರು.
Advertisement