ಬೆಂಗಳೂರು: ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ 50ರ ರಿಯಾಯಿತಿ ನೀಡಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಸೈಬರ್ ಅಪರಾಧಿಗಳು ಇದನ್ನೇ ಆಯುಧವನ್ನಾಗಿ ಮಾಡಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ.
ಸೈಬರ್ ವಂಚಕರು ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಸಹಾಯ ಮಾಡುವುದಾಗಿ ಹೇಳುವ ಎಪಿಕೆ ಫೈಲ್ ಲಿಂಕ್ ಅನ್ನು ವಾಟ್ಸಾಪ್‌ಗೆ ಕಳುಹಿಸುವ ಮೂಲಕ ಹಣವನ್ನು ದೋಚಿರುವುದು ವರದಿಯಾಗಿದೆ.
ಇತ್ತೀಚೆಗೆ, 50 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆನ್‌ಲೈನ್‌ನಲ್ಲಿ ಸಂಚಾರ ಉಲ್ಲಂಘನೆ ಶುಲ್ಕವನ್ನು ಪಾವತಿಸಲು ಲಿಂಕ್ ಎಂದು ನಂಬಿ ವಾಟ್ಸಾಪ್ ಮೂಲಕ ಕಳುಹಿಸಲಾದ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ್ದಾರೆ. ಆಗ 2.65 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಟೆಲಿಕಾಂ ಲೇಔಟ್ ನಿವಾಸಿ ಮುರಳಿ ಮೋಹನ್ ಶನಿವಾರ ಸರ್ಕಾರಿ ವೆಬ್‌ಸೈಟ್‌ನಲ್ಲಿ ತಮ್ಮ ವಾಹನದ ಮೇಲೆ ಸಂಚಾರ ದಂಡಗಳಿವೆಯೇ ಎಂದು ಪರಿಶೀಲಿಸಿದ್ದಾರೆ. ಅದಾದ ಸ್ವಲ್ಪ ಸಮಯದ ನಂತರ, ಅವರಿಗೆ ಅವಪರಿಚಿತ ಸಂಖ್ಯೆಯಿಂದ APK ಲಿಂಕ್ ಹೊಂದಿರುವ ವಾಟ್ಸಾಪ್ ಸಂದೇಶ ಬಂದಿದೆ. ದಂಡ ಪಾವತಿಸಲು ಅದನ್ನು ಡೌನ್‌ಲೋಡ್ ಮಾಡುವಂತೆ ಸೂಚಿಸಲಾಗಿತ್ತು. ಅದನ್ನು ನಿಜವೆಂದು ನಂಬಿ, ಫೈಲ್ ಅನ್ನು ಕ್ಲಿಕ್ ಮಾಡಿದ ಕೂಡಲೇ ಅವರ ಫೋನ್ ಹ್ಯಾಕ್ ಆಗಿದೆ. ಅದಾದ ಕೆಲವೇ ನಿಮಿಷಗಳಲ್ಲಿ, ಅವರ ಖಾತೆಯಿಂದ 2,65,979 ರೂ.ಗಳನ್ನು ದೋಚಲಾಗಿದೆ ಎಂದು ಕೊಡಿಗೇಹಳ್ಳಿ ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಹಣದ ಜಾಡನ್ನು ಪತ್ತೆಹಚ್ಚಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
Advertisement