
ಬೆಳಗಾವಿ: ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡಿದರೆ ನಮ್ಮಆಕ್ಷೇಪವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ ಹೇಳಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡಿದರೆ ಪಿತೂರಿಯ ಹಿಂದೆ ಯಾರಿದ್ದಾರೆಂಬ ಸತ್ಯ ಹೊರಬರುತ್ತದೆ. ಅಗತ್ಯವಿದ್ದರೆ, ಇನ್ನೂ ಹೆಚ್ಚಿನ ಮಟ್ಟದ ತನಿಖೆ ನಡೆಸಬೇಕು. ಜನರು ತಮ್ಮ ನಿಯಮಿತ ಕೆಲಸವನ್ನು ಬದಿಗಿಟ್ಟು ಧರ್ಮಸ್ಥಳದ ಬಗ್ಗೆ ಚರ್ಚಿಸುತ್ತಿದ್ದಾರೆಂದು ಹೇಳಿದರು.
ನ್ಯಾಯಾಲಯವು ತನಿಖೆಗೆ ನಿರ್ದೇಶಿಸಿದ ನಂತರ ಸರ್ಕಾರ ಎಸ್ಐಟಿ ರಚಿಸಿತ್ತು. ಕಳೆದ 15 ದಿನಗಳಿಂದ ಎಸ್ಐಟಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಪ್ರಕರಣವನ್ನು ರಾಜಕೀಯದೊಂದಿಗೆ ತಳುಕು ಹಾಕುವ ಪ್ರಯತ್ನಗಳನ್ನು ತಳ್ಳಿಹಾಕಿದ ಅವರು, "ಇದಕ್ಕೂ ಎಡ ಅಥವಾ ಬಲ ಪಂಥಗಳಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ವಿಷಯವೂ ಅಲ್ಲ ಅಥವಾ ದೇಶಕ್ಕೆ ಸಂಬಂಧಿಸಿದ ವಿಷಯವೂ ಅಲ್ಲ. ಇದು ಸ್ಥಳೀಯ ಸಮಸ್ಯೆಯಾಗಿದ್ದು, ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು.
Advertisement