
ಗದಗ: ಏಕಾಏಕಿ ಮನೆಗಳ ಆವರಣಕ್ಕೆ ನುಗ್ಗುವ, ರಾತ್ರಿ ಹೊತ್ತು ಗಲೀಜು ಮಾಡುವ, ಹೊತ್ತಲ್ಲದ ಹೊತ್ತಲ್ಲಿ ಅಂಗಳದಲ್ಲಿ ನಿಂತು ಬೊಗಳುವ ಬೀದಿ ನಾಯಿಗಳ ಕಾಟವನ್ನು ಯಕಶ್ಚಿತ್ ಒಂದು ನೀರಿನ ಬಾಟಲಿ ತಪ್ಪಿಸಬಹುದು ಎಂದರೆ ನಂಬುತ್ತೀರಾ?
ಗದಗದ ಹಲವು ಗ್ರಾಮಗಳಲ್ಲಿ ಇಂಥಹುದೊಂದು ಪ್ರಯೋಗ ಯಶಸ್ವಿಯಾಗಿದ್ದು ಕುತೂಹಲ ಕೆರಳಿಸಿದ್ದಲ್ಲದೆ ಭಾರೀ ಚರ್ಚೆಗೆ ಕಾರಣವಾಗಿದೆ.
ಗದಗದಲ್ಲಿ ಅಷ್ಟೇ ಅಲ್ಲದೆ, ರಾಜ್ಯದ ಹಲವೆಡೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಗದಗದ ಅನೇಕ ಭಾಗಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ನಡಸುತ್ತಿವೆ. ಇದರಿಂದ ಇಲ್ಲಿನ ಜನತೆ ಬೇಸತ್ತು ಹೋಗಿದ್ದಾರೆ. ಆದರೆ, ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎಂಬ ಗಾದೆಮಾತಿನಂತೆ, ಒಂದು ಚಿಕ್ಕ ಉಪಾಯವೊಂದು ಇಲ್ಲಿನ ಜನತೆಗೆ ಬೀದಿನಾಯಿ ಸಮಸ್ಯೆಯನ್ನು ದೂರ ಮಾಡಿದೆ.
ಏನದು ಉಪಾಯ ಅಂತೀರಾ...ಅದು ಕೆಂಪು ಮತ್ತು ಹಳದಿ ನೀರಿನ ಬಾಟಲಿ ಪ್ರಯೋಗ. ಏನಿದು ಬಾಟಲಿ ಪ್ರಯೋಗ?: ಕೆಂಪು ಮತ್ತು ಹಳದಿ ಬಣ್ಣದ ಬಾಟಲಿಯಲ್ಲಿ ಅರ್ಧಕ್ಕೆ ನೀರು ತುಂಬಿಸಿ ಮನೆಯ ಸಿಟೌಟ್ ಅಥವಾ ಜಗಲಿಯ ಮೇಲೆ ಇಟ್ಟರೆ ಸಾಕು. ಬೀದಿ ನಾಯಿಗಳು ಅದನ್ನು ನೋಡಿ ಹತ್ತಿರ ಬರುವುದಿಲ್ಲ. ಗೊತ್ತಿಲ್ಲದೆ ಹತ್ತಿರ ಬಂದವು ಬಾಟಲಿ ನೋಡಿದ ಕೂಡಲೇ ಓಡುತ್ತವೆ.
ಆರಂಭದಲ್ಲಿ ಕೆಲವೇ ಮನೆಗಳಲ್ಲಿ ನಡೆದ ಈ ಪ್ರಯೋಗದ ಯಶಸ್ಸನ್ನು ನೋಡಿ ಈಗ ಹಲವಾರು ಮನೆಗಳು ಈ ತಂತ್ರವನ್ನು ಬಳಸುತ್ತಿವೆ.
ಇಲ್ಲಿ ಅಚ್ಚರಿ ಏನೆಂದರೆ ಬಾಟಲಿಯನ್ನು ನೋಡಿ ನಾಯಿ ಯಾಕೆ ಓಡುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿ ಪರಿಣಮಿಸಿದೆ. ಜನರಿಗೂ ಉತ್ತರ ಗೊತ್ತಿಲ್ಲ. ಆದರೆ, ಯಶಸ್ವಿಯಾಗಿರುವುದು ನಿಜ. ಹಾಗಾಗಿ ಉಳಿದ ಕಡೆಗಳಲ್ಲೂ ಅದರ ಪ್ರಚಾರ ನಡೆಯುತ್ತಿದೆ. ಹಾಗಂತ ಇದು ಬೀದಿ ನಾಯಿಗಳೇ ತುಂಬಿರುವ ನಗರ ಪ್ರದೇಶಕ್ಕೆ ಈ ಪ್ರಯೋಗ ಯಶಸ್ವಿಯಾದೀತೇ ಎಂದು ಹೇಳುವ ಹಾಗಿಲ್ಲ.
ನಾಯಿಗಳು ನೀರು ತುಂಬಿದ ಹಸಿರು ಬಾಟಲಿ ನೋಡಿ ದೂರ ಹೋಗುವುದೇಕೆ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಸ್ವತ: ಪಶುವೈದ್ಯರೇ ಅಚ್ಚರಿಪಟ್ಟಿದ್ದಾರೆ.
ಗದಗ ಪಟ್ಟಣದ ನಿವೃತ್ತ ವಿಜ್ಞಾನ ಶಿಕ್ಷಕ ರಾಮಚಂದ್ರ ಮೋನೆ ಅವರು, ಈ ಉಪಾಯದ ಹಿಂದೆ ಯಾವುದೇ ವಿಜ್ಞಾನವಿಲ್ಲ. ಈ ಹಿಂದೆ ಜನರು ಸಣ್ಣ ಕೀಟಗಳ ಕಾಟದಿಂದ ಮುಕ್ತಿ ಪಡೆಯಲು ಸಣ್ಣ ಪ್ಲಾಸ್ಟಿಕ್ ಬಣ್ಣದ ನೀರಿನ ಚೀಲಗಳನ್ನು ಕಟ್ಟುತ್ತಿದ್ದರು, ಆದರೆ, ನಾಯಿಗಳು ಇದರಿಂದ ಭಯಭೀತಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
HUDCO ಕಾಲೋನಿಯ ಪ್ರಕಾಶ್ ಸೋಮರೆಡ್ಡಿ ಎಂಬುವವರು ಮಾತನಾಡಿ, “ನಮ್ಮ ಮನೆಯ ಬಳಿ ನಾಯಿ ಕಡಿತದ ಘಟನೆಯನ್ನು ನೋಡಿದ ನಂತರ ನಾವು ನಾಯಿ ಕಾಟದಿಂದ ಮುಕ್ತಿ ಪಡೆಯಲು ಪರಿಹಾರಕ್ಕಾಗಿ ಹುಡುಕಾಟ ನಡೆಸಿದ್ದೆವು. ಈ ವೇಳೆ ನನ್ನ ಸ್ನೇಹಿತರು ಬಣ್ಣ ಪ್ರಯೋಗದ ಸಲಹೆ ನೀಡಿದ್ದರು. ಬಣ್ಣದ ನೀರಿನ ಬಾಟಲಿಗಳನ್ನು ಮನೆಯ ಬಾಗಿಲ ಬಳಿ ಕಟ್ಟಿದೆವು. ಇದೀಗ ಯಾವುದೇ ಬೀದಿ ನಾಯಿಯ ಸಮಸ್ಯೆಯಿಲ್ಲ. ಯಾರು ಏನೇ ಅದರೂ, ಕುರುಡು ನಂಬಿಕೆ ಎಂದರೂ ಸರಿ, ಆದರೆ, ನಮ್ಮ ಸಮಸ್ಯೆಗೆ ಇದರಿಂದ ಪರಿಹಾರ ಸಿಕ್ಕಿದೆ ಎಂದು ಹೇಳಿದ್ದಾರೆ.
ನಾಯಿಗಳು ಕೆಂಪು ಮತ್ತು ಹಳದಿ ಬಣ್ಣದ ನೀರಿನ ಬಾಟಲಿಗಳಿಗೆ ಹೆದರುತ್ತಿವೆ. ಇದರಿಂದ ಮನೆಗಳ ಬಳಿ ಬರುವುದನ್ನು ನಿಲ್ಲಿಸಿವೆ ಎಂದು ತಿಳಿಸಿದ್ದಾರೆ.
ಈ ಕುರಿತ ವಿಚಾರ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಂಬಳ, ನಾಗಾವಿ, ಲಿಂಗದಲ್, ಬೆಲದಡಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು ಕೂಡ ಈ ವಿಧಾನವನ್ನು ಅನುಸರಿಸುತ್ತಿದ್ದಾರೆ.
Advertisement