
ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಅದು ಧರ್ಮಸ್ಥಳ ವಿಷಯವಾಗಿರಬಹುದು ಅಥವಾ ಚಾಮುಂಡಿ ದೇವಾಲಯವಾಗಿರಬಹುದು, ರಾಜ್ಯ ಸರ್ಕಾರ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ಅವಮಾನಿಸಿದೆ. ಮೈಸೂರು ಒಡೆಯರು ಚಾಮುಂಡೇಶರಿ ದೇವಿಯನ್ನು ತಮ್ಮ ಕುಟುಂಬ ದೇವತೆಯಾಗಿ ಪೂಜಿಸುತ್ತಾರೆ. ಇದು ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಹೇಳುವ ಮೂಲಕ ಸರ್ಕಾರ ಏನನ್ನು ತೋರಿಸಲು ಪ್ರಯತ್ನಿಸುತ್ತಿದೆ. ಮಸೀದಿ ಅಥವಾ ಚರ್ಚ್‌ಗಳು ಎಲ್ಲರಿಗೂ ಸೇರಿವೆ ಎಂದು ಸರ್ಕಾರ ಹೇಳುವುದಿಲ್ಲ, ಆದರೆ, ಹಿಂದೂ ದೇವಾಲಯಗಳು ಮಾತ್ರ ಎಲ್ಲರಿಗೂ ಸೇರಿವೆ ಎಂದು ಹೇಳುತ್ತದೆ. ತಮ್ಮ ಹೇಳಿಕೆ ಕುರಿತು ಡಿಕೆ.ಶಿವಕುಮಾರ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾನು ಮುಷ್ತಾಕ್ ಮತ್ತು ನಿಸಾರ್ ಅಹ್ಮದ್ ನಡುವೆ ಯಾವುದೇ ಹೋಲಿಕೆ ಇಲ್ಲ, ನಿಸಾರ್ ಅವರು ಎಂದಿಗೂ ಹಿಂದೂ ಧರ್ಮದ ಬಗ್ಗೆ ಮಾತನಾಡಲಿಲ್ಲ. ದಸರಾ ಉತ್ಸವಕ್ಕೆ ಸರ್ಕಾರ ಆಹ್ವಾನ ನೀಡಿದ್ದು, ತಾಯಿ ಚಾಮುಂಡೇಶ್ವರಿಯೇ ತಮಗೆ ಆಹ್ವಾನ ನೀಡಿದ್ದಾರೆಂದು ಬಾನು ಅವರು ಹೇಳಿದ್ದಾರೆ. ಆದರೆ, ಅವರ ಮಸೀದಿಯಲ್ಲಿಯೇ ಅವರಿಗೆ ಪ್ರವೇಶವಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಡಿಕೆ.ಶಿವಕುಮಾರ್ ಅವರು ರಾಜ್ಯ ಶಿವಕುಮಾರ್ ಮುಖ್ಯಮಂತ್ರಿಯಾಗಲು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಚಾಮುಂಡಿ ದೇವಸ್ಥಾನದ ಬಗ್ಗೆ ಅವರ ಹೇಳಿಕೆ ಇಡೀ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ ಎಂದರು.
ಸರ್ಕಾರ ದಸರಾ ಉತ್ಸವಕ್ಕೆ ಬಾನು ಮುಷ್ತಾಕ್ ಅವರನ್ನು ಮಾತ್ರ ಏಕೆ ಆಹ್ವಾನಿಸಿದೆ? ದೀಪಾ ಭಸ್ತಿ ಕೂಡ ಪ್ರಶಸ್ತಿಯ ವಿಜೇತೆ. ಸರ್ಕಾರ ಅವರನ್ನೇಕೆ ಆಹ್ವಾನಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
Advertisement