
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಲು ಸಮೀಕ್ಷೆಯ ಅವಧಿಯನ್ನು ಸೆಪ್ಟೆಂಬರ್ 1ರವರೆಗೂ ವಿಸ್ತರಣೆ ಮಾಡಲಾಗಿದೆ.
ಕರ್ನಾಟಕದಲ್ಲಿರುವ ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿಗಳು, ಅನುಸೂಚಿತ ಜಾತಿ ಮತ್ತು ಪಂಗಡಗಳೂ ಸೇರಿದಂತೆ ಎಲ್ಲಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರಕಾರದ ಆದೇಶಾನುಸಾರ ಕೈಗೊಳ್ಳಲು ಆಯೋಗ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿ/ಉಪಜಾತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಆ.22ರಂದು ಜಾತಿ, ಉಪಜಾತಿಗಳ ಪಟ್ಟಿ ಮಾಡಿ, ಅದರಲ್ಲಿಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ 7 ದಿನಗಳ ಒಳಗೆ ಅವುಗಳ ಮಾಹಿತಿ, ಸಲಹೆ ನೀಡಲು ಗಡುವು ನೀಡಲಾಗಿತ್ತು.
ಸಾರ್ವಜನಿಕರು ಹಾಗೂ ವಿವಿಧ ಸಂಘ- ಸಂಸ್ಥೆಗಳ ಕೋರಿಕೆ ಮೇರೆಗೆ ಸೆ.1ರಂದು ಸಂಜೆ 5 ಗಂಟೆವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಸಂಗ್ರಹಿಸಲಾದ ಜಾತಿ/ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರು ತಮ್ಮ ಸಲಹೆ/ಸೂಚನೆ/ಮನವಿಗಳನ್ನು ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16, ಡಿ.ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತನಗರ, ಬೆಂಗಳೂರು ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 080-29506668 ಸಂಪರ್ಕಿಸಬಹುದು.
Advertisement