
ಮೈಸೂರು: 'ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಭುವನೇಶ್ವರಿ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ, ಅವರು ದಸರಾ ಉದ್ಘಾಟಿಸುವುದಕ್ಕೆ ನನ್ನ ವಿರೋಧವಿದೆ' ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಹೇಳಿದರು.
'ದಸರಾ ಉದ್ಘಾಟನೆಗೆ ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ನಾನು ಆ ನಿರ್ಧಾರವನ್ನು ಸ್ವಾಗತಿಸಿದ್ದೆ. ಆದರೆ, ಈಗ ಅವರ ಹಳೆಯ ಭಾಷಣದ ತುಣುಕನ್ನು ನೋಡಿದೆ. ಆ ಭಾಷಣಕ್ಕೆ ಅವರು ಸ್ಪಷ್ಟೀಕರಣ ಕೊಡಲಿ ಅಥವಾ ಆ ಹೇಳಿಕೆಯನ್ನು ವಾಪಸ್ ಪಡೆಯಲಿ' ಎಂದು ಬಿಜೆಪಿ ಸಂಸದ ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಸ್ಪಷ್ಟೀಕರಣ ನೀಡದಿದ್ದರೆ, ದಸರಾ ಉದ್ಘಾಟನೆಗೆ ನನ್ನ ವಿರೋಧವಿದೆ. ಪಕ್ಷದ ನಿರ್ಧಾರವೇ ನನ್ನ ನಿರ್ಧಾರ. ಪಕ್ಷದ ವಿರುದ್ಧದ ನಿಲುವಿಗೆ ಸಮ್ಮತಿಯಿಲ್ಲ. ಚಾಮುಂಡೇಶ್ವರಿ ದೇವಿಯನ್ನು ಪೂಜಿಸುವುದರಲ್ಲಿ ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ ಎಂದು ನಾವು ಕೇಳಿದ್ದೇವೆ. ಅದು ನಿಜವಾಗಿದ್ದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ' ಎಂದರು.
ಚಾಮುಂಡಿ ಬೆಟ್ಟವು ಧಾರ್ಮಿಕ ಸ್ಥಳವಾಗಿದೆ ಮತ್ತು ಪ್ರತಿಯೊಬ್ಬರೂ ದೇವಿಯನ್ನು ಪೂಜಿಸುತ್ತಾರೆ. ಅವರ ಧರ್ಮದ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆಯೇ ಶ್ರೇಷ್ಠ. ಅವರು ಮೊದಲು (2023 ರಲ್ಲಿ) ಏಕೆ ಹಾಗೆ ಹೇಳಿದರು ಎಂಬುದನ್ನು ಸ್ಪಷ್ಟಪಡಿಸಬೇಕು. ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರೆ ಒಳ್ಳೆಯದು. ಏಕೆಂದರೆ, ಅದು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ವಿಷಯವಾಗಿದೆ ಎಂದು ಅವರು ಹೇಳಿದರು.
'ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಅವರ ಹೇಳಿಕೆಯು ಹಿಂದೂ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂಬುದನ್ನು ಅವರು ವಿವರಿಸಬೇಕಾಗಿದೆ. ಇದು ಧರ್ಮ ಮತ್ತು ಕನ್ನಡ ಭಾಷೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಅವರು ವಿವರಣೆಯನ್ನು ನೀಡಬೇಕಾಗಿದೆ. ಕರ್ನಾಟಕ ಮತ್ತು ಕನ್ನಡ ಭಾಷೆ ಭುವನೇಶ್ವರಿ ದೇವಿಯೊಂದಿಗೆ ಸಂಬಂಧ ಹೊಂದಿದೆ' ಎಂದು ಹೇಳಿದರು.
ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ನಾಡಿನ ಎಲ್ಲ ಮಕ್ಕಳ ಆಸ್ತಿ, ಯಾರೊಬ್ಬರಿಗೂ ಸೀಮಿತ ಅಲ್ಲ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಒಡೆಯರ್, ಚಾಮುಂಡಿ ಬೆಟ್ಟ ಹಿಂದಿನ ಕಾಲದಿಂದಲೂ ಹಿಂದೂಗಳ ದೇವಸ್ಥಾನ. ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ. ಇದು ಬೇರೆಯವರ ಶ್ರದ್ಧಾಕೇಂದ್ರವಾಗಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದರು.
'ಚಾಮುಂಡಿ ಬೆಟ್ಟವು ಹಿಂದೂ ಧಾರ್ಮಿಕ ಸ್ಥಳವಾಗಿದ್ದು, ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಋಷಿ ಮಾರ್ಕಂಡೇಯ ಇಲ್ಲಿ ದೇವಿಯ ಪ್ರತಿಮೆಯನ್ನು ಸ್ಥಾಪಿಸಿದ್ದರು. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ–ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ' ಎಂದು ಹೇಳಿದರು.
Advertisement