GST ಸರಳೀಕರಣ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಸ್ಥಿರಗೊಳ್ಳುವವರೆಗೆ ಕೌನ್ಸಿಲ್ ಪರಿಹಾರ ನೀಡಲಿ: ಸಿದ್ದರಾಮಯ್ಯ

ಜಿಎಸ್ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ಜಿಎಸ್ಟಿ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು .
Siddaramaiah
ಸಿದ್ದರಾಮಯ್ಯ
Updated on

ಬೆಂಗಳೂರು: ಜಿಎಸ್‌ಟಿ ಜಂಟಿ ಜವಾಬ್ದಾರಿಯಾಗಿದ್ದು, ರಾಜ್ಯ ಸರಕಾರಗಳು ಮತ್ತು ಕೇಂದ್ರದ ಸಮಾನ ಜವಾಬ್ದಾರಿ ಮತ್ತು ಗೌರವದ ಆಧಾರಿತವಾಗಿದೆ. ಜಿಎಸ್‌ಟಿಯ ಪ್ರಯೋಜನ ಪಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕು.

ಆದ್ದರಿಂದ ಜಿಎಸ್‌ಟಿ ದರ ಬದಲಾವಣೆ ವಿಷಯದಲ್ಲಿ ಕೇಂದ್ರ ಸರಕಾರವು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ವಿಪಕ್ಷಗಳ ಆಡಳಿತ ಹೊಂದಿರುವ ಎಂಟು ರಾಜ್ಯ ಸರಕಾರಗಳ ಸಭೆಯಲ್ಲಿ ಜಿಎಸ್‌ಟಿಯ ತೆರಿಗೆ ದರ ಬದಲಾವಣೆಯನ್ನು ಏಕಪಕ್ಷೀಯವಾಗಿ ಕೇಂದ್ರ ಸರಕಾರ ಮಾಡುತ್ತಿರುವುದನ್ನು ವಿರೋಧಿಸಿ ಕೈಗೊಂಡ ನಿರ್ಣಯವನ್ನು ಮುಖ್ಯಮಂತ್ರಿಗಳು ಸ್ವಾಗತಿಸಿ ಪತ್ರಿಕಾ ಪ್ರಕಟನೆ ನೀಡಿದ್ದಾರೆ.

ಕೇಂದ್ರ ಸರಕಾರವು ರಾಜ್ಯಗಳ ಬೇಡಿಕೆಗೆ ಧನಾತ್ಮಕ ಮತ್ತು ರಚನಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಹೊಂದಿದ್ದೇವೆ. ನೈಜ ಒಕ್ಕೂಟ ವ್ಯವಸ್ಥೆಯ ಆಶಯದೊಂದಿಗೆ ಕೇಂದ್ರ ಸರಕಾರವು ರಾಜ್ಯಗಳ ಜತೆ ಚರ್ಚೆ ನಡೆಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸಮಾನ ಮನಸ್ಕ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಭಾಗವಹಿಸಿದ್ದರು.ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಜಿಎಸ್ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ಜಿಎಸ್ಟಿ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು ಹಾಗೂ ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೆ ಹೊರತು ಕೆಲವು ಕಂಪೆನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದು ಎಂದು ಅಭಿಪ್ರಾಯಪಟ್ಟರು.

Siddaramaiah
GST ತೆರಿಗೆಯಲ್ಲಿ ಸುಧಾರಣೆ; ಗ್ರಾಹಕನಿಗೆ ಜೇಬಿಗೆ ಮನ್ನಣೆ! (ಹಣಕ್ಲಾಸು)

ಪ್ರಸ್ತಾವಿತ ಜಿಎಸ್ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ರಾಜ್ಯಗಳಿಗೆ ಭಾಗಶಃ 85ಸಾವಿರ ಕೋಟಿಯಿಂದ 2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ.

ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರ್ಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಕೇಂದ್ರ ಸರ್ಕಾರ ತಮ್ಮ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್ಟಿ ಕೌನ್ಸಿಲ್ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಗಳಿಗೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಕೇಂದ್ರದ ಆದಾಯದಲ್ಲಿ ಜಿಎಸ್ಟಿ ಪಾಲು ಕೇವಲ ಶೇ. 28ರಷ್ಟು ಮಾತ್ರ. ಉಳಿದ ಶೇ.72ರಷ್ಟು ಆದಾಯವನ್ನು ಕೇಂದ್ರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ , ಆದಾಯ ತೆರಿಗೆ, ಕಸ್ಟಮ್ಸ್, ಡೆವಿಡೆಂಟ್ ಹಾಗೂ ವಿವಿಧ ಸೆಸ್ ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ.17 ರಿಂದ ಶೇ.20 ರಷ್ಟು ಆದಾಯ ಗಳಿಸುತ್ತದೆ.

ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಸಹ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್ಟಿ ಪಾಲು ಶೇ.50 ರಷ್ಟು. ಹೀಗಾಗಿ ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದ ಶೇ.20ರಷ್ಟು ಆದಾಯ ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Siddaramaiah
GST Rates: ಜಿಎಸ್ ಟಿಯಲ್ಲಿ ಭಾರೀ ಕಡಿತ: ಶೇ.28, ಶೇ.12 ರಷ್ಟು ತೆರಿಗೆ ರದ್ದುಗೊಳಿಸಲು GoM ಸಮ್ಮತಿ! ಶೇ.90 ರಷ್ಟು ಸರಕು ಅಗ್ಗ!

ಕೇಂದ್ರ ಸರ್ಕಾರದಿಂದ ನಿಧಿ ಹಂಚಿಕೆಯಲ್ಲಿ ಕರ್ನಾಟಕವು ಈಗಾಗಲೇ ತಾರತಮ್ಯಕ್ಕೆ ಒಳಗಾಗಿದ್ದು, ವಾರ್ಷಿಕ ಸುಮಾರು 25,000 ಕೋಟಿ ರೂ.ಗಳ ಕೊರತೆಯನ್ನು ಅನುಭವಿಸುತ್ತಿದೆ. ಜಿಎಸ್‌ಟಿ ಆದಾಯದಲ್ಲಿ ಮತ್ತಷ್ಟು ಇಳಿಕೆ ಕಂಡುಬಂದರೆ ಅದು ಈ ಅನ್ಯಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಅಭಿವೃದ್ಧಿ ಮತ್ತು ಕಲ್ಯಾಣದ ಭರವಸೆಗಳನ್ನು ಈಡೇರಿಸುವ ನಮ್ಮ ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ" ಎಂದು ಅವರು ಎಚ್ಚರಿಸಿದರು.

ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು 2017ರಲ್ಲಿ ಪರಿಚಯಿಸುವಾಗ ಕೇಂದ್ರ ಸರ್ಕಾರ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಹೇಳಿತ್ತು. ಆದರೆ, ಪರಿಹಾರ ವ್ಯವಸ್ಥೆಯನ್ನು 2022ಕ್ಕೆ ತೆಗೆದುಹಾಕಲಾಗಿತ್ತು. ಪರಿಣಾಮ ಬಹುಪಾಲು ರಾಜ್ಯಗಳು ಶೇ.25 ರಷ್ಟು ಆದಾಯ ನಷ್ಟ ಎದುರಿಸಿದ್ದವು. ರಾಜ್ಯಗಳ ಆದಾಯ ಶೇ.25 ರಷ್ಟು ಕುಸಿಯುತ್ತಿದ್ದ ಸಂದರ್ಭದಲ್ಲಿ ಜಿಎಸ್ಟಿ ಸ್ಥಿರಗೊಂಡಿದೆ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಜಿಎಸ್ಟಿ ಸರಳೀಕರಣ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ಪರಿಹಾರ ನೀಡಲಿ” ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com