ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತಂಡ ಶನಿವಾರ ಬಂಧಿತ ಸಾಕ್ಷಿ-ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗಾಗಿ ಕೆಲವು ಸ್ಥಳಗಳಿಗೆ ಕರೆದೊಯ್ದಿತ್ತು. ಚಿನ್ನಯ್ಯನನ್ನು ಬೆಂಗಳೂರಿನ ಪೀಣ್ಯಾದಲ್ಲಿರುವ ಮತ್ತೊಬ್ಬ ದೂರುದಾರ ಜಯಂತ್ ಟಿ ಮನೆಗೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದೆ. ಎಸ್‌ಐಟಿ ಮಹಜರ್ ನಡೆಸುವ ವೇಳೆ ಜಯಂತ್‌ನ ಪತ್ನಿ ಸೈಮಾ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಎಸ್‌ಪಿ ಸೈಮನ್ ನೇತೃತ್ವದ ತಂಡ ಚಿನ್ನಯ್ಯ ಯಾವಾಗ ಮತ್ತು ಎಷ್ಟು ಬಾರಿ ಮನೆಗೆ ಬಂದಿದ್ದ ಎಂಬ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದೆ. ಇನ್ನು ಜಯಂತ್ ಸಹ ಚಿನ್ನಯ್ಯ ಜೊತೆ ಬುರುಡೆ ತೆಗೆದುಕೊಂಡು ದೆಹಲಿಗೆ ಹೋಗಿದ್ದೇವು. ಅಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಬುರುಡೆಯನ್ನು ಒಪ್ಪಿಸಲು ಯೋಜಿಸಿದ್ದೇವು. ಅದು ಸಾಧ್ಯವಾಗಲಿಲ್ಲ. ಚಿನ್ನಯ್ಯ ಬೆಂಗಳೂರಿನ ನನ್ನ ಮನೆಯಲ್ಲಿ 3 ದಿನ ಇದ್ದನು ಎಂದು ಹೇಳಿದ್ದರಿಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಯುಪಿಎಸ್‌ಸಿಯಿಂದ ಆಯ್ಕೆ ಪಟ್ಟಿ ಬಂದ ಒಂದು ವಾರದೊಳಗೆ ನಿಯಮಿತ ಡಿಜಿಪಿಯನ್ನು ನೇಮಿಸಲಾಗುವುದು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಅದರಂತೆ ಇದೀಗ ಹಿರಿಯ ಐಪಿಎಸ್ ಅಧಿಕಾರಿ ಎಂ ಸಲೀಂ ಅವರನ್ನು ನೇಮಕ ಮಾಡಿದೆ.
ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ ಪ್ರತಿ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಆರ್ಥಿಕ ಸಹಾಯ ನೀಡಿರುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ. 2025ರ ಜೂನ್ 4ರಂದು ನಡೆದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ದುರ್ಘಟನೆ ನಡೆದ 3 ತಿಂಗಳ ನಂತರ ಈಗ ಎರಡು ದಿನಗಳ ಹಿಂದೆ ಆರ್ಸಿಬಿ ಕೇರ್ಸ್ ಪ್ರಾರಂಭಿಸಿರುವುದಾಗಿ RCB ಫ್ರಾಂಚೈಸಿ ತಿಳಿಸಿತ್ತು. ಅಲ್ಲದೆ ಆರ್ಸಿಬಿ ಕೇರ್ಸ್ ಮೂಲಕ ಸಂತ್ರಸ್ತರ ಕುಟುಂಬಗಳಿಗೆ ಮತ್ತಷ್ಟು ಸಹಾಯಹಸ್ತ ನೀಡುವ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆಯನ್ನು ಸಹ ನೀಡಿದೆ.
ಉಪರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಭಾಗಿಯಾಗಿರುವುದನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ. ಉಪರಾಷ್ಟ್ರಪತಿ ಚುನಾವಣೆ ರಾಜಕೀಯ ವಿಷಯವಾಗಿದ್ದು, ನಿವೃತ್ತ ನ್ಯಾಯಾಧೀಶರು ಇದರಲ್ಲಿ ಭಾಗವಹಿಸುವುದರಿಂದ ಅವರ ಅಧಿಕಾರಾವಧಿಯಲ್ಲಿಯೂ ಅವರು ಸೈದ್ಧಾಂತಿಕ ಒಲವು ಹೊಂದಿದ್ದರು ಎಂಬ ಭಾವನೆ ಮೂಡಿಸುತ್ತದೆ ಎಂದರು. ವಿಧಾನಸೌಧದಲ್ಲಿ ವಕೀಲರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಿಜಿಜು, 'ಕೆಲವು ನಿವೃತ್ತ ನ್ಯಾಯಾಧೀಶರು ಗೃಹ ಸಚಿವರ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ಇದು ಒಳ್ಳೆಯದಲ್ಲ. ಉಪರಾಷ್ಟ್ರಪತಿ ಚುನಾವಣೆ ರಾಜಕೀಯ ವಿಷಯವಾಗಿದ್ದು, ನಿವೃತ್ತ ನ್ಯಾಯಾಧೀಶರು ಏಕೆ ಮಧ್ಯಪ್ರವೇಶಿಸಬೇಕು? ಇದರಿಂದ ಅವರು ನ್ಯಾಯಾಧೀಶರಾಗಿದ್ದಾಗಲೂ ಅವರಿಗೆ ವಿಶಿಷ್ಟ ಸಿದ್ಧಾಂತವಿತ್ತು ಎಂಬ ಭಾವನೆ ಮೂಡುತ್ತದೆ. ಗೃಹ ಸಚಿವರ ವಿರುದ್ಧ ಸಹಿ ಅಭಿಯಾನವನ್ನು ಪ್ರಾರಂಭಿಸಿ ಪತ್ರ ಬರೆಯುವುದು ಸರಿಯಲ್ಲ' ಎಂದು ಹೇಳಿದರು.
ಸಾಮೂಹಿಕ ಅತ್ಯಾಚಾರ ಮತ್ತು ಸುಲಿಗೆ ಸೇರಿದಂತೆ ಹಲವಾರು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪಿ ರಮೇಶ್ ಪರಾರಿಯಾಗಲು ಯತ್ನಿಸಿದ್ದು ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ಕಿತ್ತೂರು ಠಾಣೆ ಪೊಲೀಸರು ರಮೇಶ್ ಕಿಲ್ಲಾರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಂಧಿಸಲು ತೆರಳಿದ್ದ ವೇಳೆ ರಮೇಶ್ ಕಾನ್ ಸ್ಟೇಬಲ್ ಷರೀಫ್ ಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದನು. ಆತ್ಮ ರಕ್ಷಣೆಗಾಗಿ ಪಿಎಸ್ಐ ಪ್ರವೀಣ್ ಗಂಗೊಳ್ಳಿ ರಮೇಶ್ ಮೇಲೆ ಗುಂಡು ಹಾರಿಸಿದರು. ಸದ್ಯ ಆರೋಪಿ ರಮೇಶ್ ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement