
ಬೆಂಗಳೂರು: ಬೆಂಗಳೂರಿನ ಮಹಿಳಾ ಪೇಯಿಂಗ್ ಗೆಸ್ಟ್(ಪಿಜಿ)ವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಕೋಣೆಗೆ ನುಗ್ಗಿ 23 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ನಂತರ ಹಣ ದೋಚಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಸುದ್ದಗುಂಟೆಪಾಳ್ಯದ ಗಂಗೋತ್ರಿ ವೃತ್ತದಲ್ಲಿರುವ ಮಹಿಳಾ ಪಿಜಿಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದೆ.
ಕಳೆದ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಮಹಿಳಾ ಪಿಜಿಗೆ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ತನ್ನ ಕೋಣೆಯಲ್ಲಿ ಮಲಗಿದ್ದಾಗ ಒಳನುಗ್ಗಿದ ವ್ಯಕ್ತಿ ಆಕೆಗೆ ಲೈಂಗಿಕ ಕಿರುಕುಳ ನೀಡಿ, ಹಣ ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಕ್ ಧರಿಸಿದ್ದ ಆರೋಪಿಯು ಪಿಜಿಗೆ ಬಂದು ಯುವತಿ ಇದ್ದ ರೂಮಿನೊಳಗೆ ನುಗ್ಗಿದ್ದಾನೆ. ಯಾರೋ ವ್ಯಕ್ತಿ ಬಂದಿರುವುದು ಯುವತಿಗೆ ಗೊತ್ತಾದರೂ, ಅದು ತನ್ನ ರೂಮ್ಮೇಟ್ ಇರಬಹುದು ಎಂದು ಭಾವಿಸಿ ಯುವತಿ ಮಲಗೇ ಇದ್ದಾಳೆ. ಆದರೆ, ಆ ವ್ಯಕ್ತಿಯು ರೂಮಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಡೋರ್ಲಾಕ್ ಮಾಡಿದ್ದಾನೆ. ನಂತರ ಆತ ಯುವತಿ ಬಳಿ ಹೋಗಿ ಕೈ ಕಾಲು ಸವರಿದ್ದಾನೆ.
ಯುವತಿ ಮಲಗಿದ್ದಾಗ ಆ ವ್ಯಕ್ತಿ ಅವಳನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆ ವಿರೋಧಿಸಿದಾಗ, ಚಾಕುವಿನಿಂದ ಬೆದರಿಸಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯ ಕಪಾಟಿನಿಂದ 2,500 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ತಕ್ಷಣ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತಿಕ್ರಮಣ, ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಕಳ್ಳತನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ನಡೆದು ಎರಡು ದಿನವಾದರೂ ಆರೋಪಿ ಪತ್ತೆಯಾಗಿಲ್ಲ. ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಲು ಯತ್ನಿಸುತ್ತಿದ್ದಾರೆ.
Advertisement