

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಹಲವಾರು ಶಾಪಿಂಗ್ ಮಾಲ್‌ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಅನ್ನು ನಗರ ಪೊಲೀಸ್ ಆಯುಕ್ತರ ಅಧಿಕೃತ ಐಡಿಗೆ ಕಳುಹಿಸಲಾಗಿದೆ.
ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಬಾಂಬ್ ಬೆದರಿಕೆ ಇಮೇಲ್ ಅನ್ನು ಕಳುಹಿಸಿದವರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ನವೆಂಬರ್ 30 ರಂದು ಬೆಳಗ್ಗೆ 11.53ಕ್ಕೆ ಮೋಹಿತ್ ಕುಮಾರ್ ಎಂಬ ವ್ಯಕ್ತಿಯೊಬ್ಬರು ಜಿಮೇಲ್ ಖಾತೆಯ ಮೂಲಕ ಪೊಲೀಸ್ ಆಯುಕ್ತರ ಅಧಿಕೃತ ಇಮೇಲ್ ಐಡಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಾರೆ. ಪರಿಶೀಲನೆ ನಂತರ ಇಂದು 'ಹುಸಿ ಬಾಂಬ್ ಬೆದರಿಕೆ' ಎಂದು ಕಂಡುಬಂದಿದೆ ಅವರು ಹೇಳಿದ್ದಾರೆ.
ಇಮೇಲ್ ನಲ್ಲಿ ಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಭಯೋತ್ಪಾದಕ ತಂಡದಿಂದ ಇದೊಂದು ಎಚ್ಚರಿಕೆ. ನಾವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಓರಿಯನ್ ಮಾಲ್, ಲುಲು ಮಾಲ್, ಫೋರಂ ಸೌತ್ ಮಾಲ್ ಮತ್ತು ಮಂತ್ರಿ ಸ್ಕ್ವೇರ್ ಮಾಲ್‌ಗಳಲ್ಲಿ ಸಂಜೆ 7 ಗಂಟೆಗೆ ಬಾಂಬ್ ಸ್ಫೋಟಿಸುತ್ತೇವೆ" ಎಂದು ಬೆದರಿಕೆ ಹಾಕಿಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇಮೇಲ್‌ನಲ್ಲಿ ಫೋನ್ ಸಂಖ್ಯೆ ಇದ್ದು, ಆ ಸಂಖ್ಯೆಗೆ ಕರೆ ಮಾಡಿ ಹಣ ಪಾವತಿಸುವ ಮೂಲಕ ದಾಳಿಯನ್ನು ತಡೆಯಬಹುದು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ, ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎಫ್(ಸೈಬರ್ ಭಯೋತ್ಪಾದನೆ) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement