

ಬೆಂಗಳೂರು: ಶೀಘ್ರದಲ್ಲೇ ಭಾರತೀಯನೊಬ್ಬ ಚಂದ್ರನ ಮೇಲೆ ಕಾಲಿಡಲಿದ್ದು, ಭಾರತೀಯ ನಿರ್ಮಿತ ಉಡಾವಣಾ ವಾಹನ ಮತ್ತು ಉಪಗ್ರಹದಲ್ಲಿ ಸುರಕ್ಷಿತವಾಗಿ ಹಿಂತಿರುಗುತ್ತಾನೆಂದು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರಿನ ಸರ್ಜಾಪುರದ ಸೇಂಟ್ ಫಿಲೋಮಿನಾ ಪಬ್ಲಿಕ್ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಭಾರತೀಯನೊಬ್ಬ ಬಾಹ್ಯಾಕಾಶಕ್ಕೆ ಹೋಗಲು 41 ವರ್ಷ ಸಮಯ ಬೇಕಾಗಿತ್ತು. 1984ರಲ್ಲಿ ಗ್ರೂಪ್ ಕ್ಯಾಪ್ಟನ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ, ಈಗ ಬಾಹ್ಯಾಕಾಶಕ್ಕೆ ಹೋಗಲು ಅಷ್ಟು ಸಮಯ ಬೇಕಾಗುವುದಿಲ್ಲ ಎಂದು ಹೇಳಿದ್ದಾರೆ.
ನಾನು ಬೆಳೆಯುತ್ತಿರುವಾಗ ಗಗಯಾತ್ರಿಯಾಗುವ ಆಲೋಚನೆ ಇರಲಿಲ್ಲ. ಆಗುತ್ತೇನೆಂದೂ ಭಾವಿಸಿರಲಿಲ್ಲ. 1984 ರಲ್ಲಿ ಮೊದಲ ಭಾರತೀಯ ಬಾಹ್ಯಾಕಾಶಕ್ಕೆ ಹೋದಾಗ, ನಾನು ಹುಟ್ಟಿಯೂ ಇರಲಿಲ್ಲ. ಆದರೆ, ವಿಚಾರ ತಿಳಿದುಕೊಂಡಾಗ ಆಕರ್ಷಿತನಾದೆ. ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಉದ್ದೇಶವೂ ನನಗಿರಲಿಲ್ಲ.
ನನ್ನ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ತರಗತಿಯ ಮೇಜಿನ ಮೇಲೆ ಅರ್ಜಿಯನ್ನು ಬಿಟ್ಟಿದ್ದರು. ಅದನ್ನು ನಾನು ಭರ್ತಿ ಮಾಡಿದ್ದೆ. ಬಳಿಕ ನಾನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆಯಾದೆ. ಪೈಲಟ್ ಆದೆ ಎಂದು ತಿಳಿಸಿದರು.
2018 ರಲ್ಲಿ ಭಾರತೀಯರು ಶೀಘ್ರದಲ್ಲೇ ಬಾಹ್ಯಾಕಾಶಕ್ಕೆ ಹೋಗುತ್ತಾರೆ ಎಂಬ ಪ್ರಧಾನಿಯವರ ಘೋಷಣೆಯನ್ನು ಕೇಳಿದಾಗ, 2019 ರಲ್ಲಿ ಆಯ್ಕೆಗಳು ಪ್ರಾರಂಭವಾದಾಗ ನಾನು ಉತ್ಸುಕನಾಗಿದ್ದೆ. 2019 ರಲ್ಲಿ ಅರ್ಜಿ ಸಲ್ಲಿಸಬಹುದಾದ ಸ್ಥಳದಲ್ಲಿದ್ದೆ, ಅಲ್ಲಿಂದ ಗಗನಯಾತ್ರಿಯಾಗಿ ನನ್ನ ಪ್ರಯಾಣ ಪ್ರಾರಂಭವಾಯಿತು ಎಂದು ತಮ್ಮ ಪಯಣವನ್ನು ಸ್ಮರಿಸಿದರು.
Advertisement