

ಶಿವಮೊಗ್ಗ: ರೈತನಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಮಂಜೂರು ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
1992ರಲ್ಲಿ ಶಿವಮೊಗ್ಗದ ಹರಮಘಟ್ಟದ ರೈತ ನಂದಾಯಪ್ಪ ಅವರ 1 ಎಕರೆ ಭೂಮಿಯನ್ನು ವಸತಿ ಯೋಜನೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು.
ಭೂಸ್ವಾಧೀನಕ್ಕೆ ಪರಿಹಾರವಾಗಿ 22 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿತ್ತು. ಆದರೆ, 9 ಲಕ್ಷ ರೂ.ಗಳನ್ನು ಮಾತ್ರವೇ ನೀಡಿದ್ದ ಸರ್ಕಾರ, ಉಳಿದ ಹಣವನ್ನು ಬಾಕಿ ಉಳಿಸಿಕೊಂಡಿತ್ತು ಎನ್ನಲಾಗಿದೆ.
ಬಾಕಿ ಪರಿಹಾರಕ್ಕಾಗಿ ರೈತ ನಂದಾಯೊಪ್ಪ ಅವರು ಜಿಲ್ಲಾಧಿಕಾರಿ ಕಚೇರಿಗೂ ಮನೆಗೂ ಅಲೆದಾಡಿ ಬಸವಳಿಸಿದ್ದರು. ಅಂತಿಮವಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕಚೇರಿಗೂ ಮನೆಗೂ ಅಲೆದಾಡಲು ಮತ್ತು ನ್ಯಾಯಾಲಯದ ವ್ಯಾಜ್ಯಗಳಿಗಾಗಿ ಮತ್ತೊಂದು ಎಕರೆ ಜಮೀನನ್ನೂ ಕಳೆದುಕೊಂಡಿದ್ದೇನೆ. ತಮಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿರುವ 2ನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು, ರೈತನಿಗೆ 95,88,283 ರೂ. ಪರಿಹಾರ ಪಾವತಿಸುವಂತೆ ಸೂಚಿಸಿತ್ತು. ಆದರೂ, ಜಿಲ್ಲಾಧಿಕಾರಿಗಳು ರೈತನಿಗೆ ಪರಿಹಾರ ಪಾವತಿ ಮಾಡಿರಲಿಲ್ಲ.
ಜಿಲ್ಲಾಧಿಕಾರಿಯ ಈ ನಡೆಗೆ ಅಸಮಾಧಾನಗೊಂಡಿರುವ ನ್ಯಾಯಾಲಯವು, ಜಿಲ್ಲಾಧಿಕಾರಿ ಬಳಸುತ್ತಿರುವ KA14 G1234 ಕಾರು ಜಪ್ತಿ ಮಾಡುವಂತೆ ಆದೇಶಿಸಿದೆ.
ಈ ನಡುವೆ ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗಗಳ ನಿರ್ವಹಣೆ ಸಂಬಂಧ ಉನ್ನತ ಮಟ್ಟದ ಸಭೆ ನಡೆಯುತ್ತಿತ್ತು.
ಅದೇ ಸಂದರ್ಭದಲ್ಲಿ ನ್ಯಾಯಾಲಯದ ಅಧಿಕಾರಿಗಳುಕಾರು ಜಪ್ತಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ಪರಿಹಾರ ವಿತರಣೆಗೆ ಗಡುವು ವಿಸ್ತರಿಸುವಂತೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
Advertisement