

ಬೆಂಗಳೂರು: ಕನೇರಿ ಮಠದ ಕಾಡೇಶ್ವರ ಸ್ವಾಮೀಜಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನ ಧಾರವಾಡ ಪೀಠವು ಮಂಗಳವಾರ ವಜಾಗೊಳಿಸಿದೆ.
ಧಾರವಾಡ ಜಿಲ್ಲಾಧಿಕಾರಿಯು 05.11.2025ರಿಂದ 3.01.2026ರವರೆಗೆ ನಿರ್ಬಂಧ ವಿಧಿಸಿ ನವೆಂಬರ್ 4ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವ ಮೂಲಕ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ಕಾಡಸಿದ್ದೇಶ್ವರ ಸ್ವಾಮೀಜಿ ಪರ ವಕೀಲರು, ಕಾಡಸಿದ್ದೇಶ್ವರ ಸ್ವಾಮೀಜಿಗೆ ಯಾವುದೇ ಷೋಕಾಸ್ ನೋಟಿಸ್ ನೀಡದೇ ಬಿಎನ್‌ಎಸ್‌ಎಸ್ ಸೆಕ್ಷನ್ 163(4) ಅಡಿ ನಿರ್ಬಂಧ ಆದೇಶ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು ಅಧಿಕಾರ ಮೀರಿದ ದುರುದ್ದೇಶಪೂರಿತ ಕ್ರಮ. ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮಾಡಿರುವ ಆದೇಶವನ್ನು ಬೇರೆ ಕಡೆ ನಿರ್ಬಂಧ ವಿಧಿಸಲು ಬಳಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನಿರ್ಬಂಧ ಆದೇಶದಿಂದ ಅರ್ಜಿದಾರರು ಬೇಕೆಂದಲ್ಲಿಗೆ ಹೋಗಲು ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಇಲ್ಲಿ ಸಕಾರಣವಿಲ್ಲದೇ ನಿರ್ಬಂಧ ಆದೇಶ ಮಾಡಲಾಗಿದೆ. 05.11.2025 ರಿಂದ 07.11.2025ರವರೆಗೆ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಧಾರವಾಡ ಜಿಲ್ಲೆಯ ಬಸವಪರ ಸಂಘಟನೆ ಮತ್ತು ಜಿಲ್ಲೆಯ ಸಮಸ್ತ ಲಿಂಗಾಯತರು ಮನವಿ ನೀಡಿದ್ದರು. ಆದರೆ, ಎರಡು ದಿನಕ್ಕೆ ಬದಲಾಗಿ ಅವರನ್ನು 2 ತಿಂಗಳು ನಿರ್ಬಂಧಿಸಿ ಆದೇಶ ಮಾಡಲಾಗಿದೆ.
ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನವೆಂಬರ್ 7ರಂದು ಮುಗಿದಿದೆ. ಬೀದರ್‌ನಲ್ಲಿ ನಡೆದಿದ್ದ ಬಸವ ಸಮಿತಿ ಕಾರ್ಯಕ್ರಮದಲ್ಲಿ ಹಿಂದುತ್ವ ಮತ್ತು ಬಸವತತ್ವ ಬೇರೆ ಬೇರೆ ಎಂದು ಹೇಳಲಾಗಿದ್ದು, ಲಕ್ಷ್ಮಿ ದೇವಿಯನ್ನು ಜೂಲಿ ಲಕ್ಷ್ಮಿ ಇತ್ಯಾದಿ ಎಂದು ಕರೆದಿದ್ದರು. ಇದಕ್ಕೆ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಅವಹೇಳನಕಾರಿ ಪದ ಬಳಸುವುದಿಲ್ಲ. ನವೆಂಬರ್ 7ರಂದು ಕಾರ್ಯಕ್ರಮ ಮುಗಿದಿದ್ದು, ಏತಕ್ಕಾಗಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು 2026 ಜನವರಿ ತಿಂಗಳವರೆಗೆ ನಿರ್ಬಂಧಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾರಣವನ್ನೂ ನೀಡಿಲ್ಲ” ಎಂದಿದ್ದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು “ಪೊಲೀಸ್ ವರಿಷ್ಠಾಧಿಕಾರಿಯ ವರದಿ ಪಡೆದು ಮ್ಯಾಜಿಸ್ಟ್ರೇಟ್ ಆದೇಶ ಮಾಡಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಮುನ್ನಚ್ಚೆರಿಕೆಯ ಭಾಗವಾಗಿ ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂ ಕೋರ್ಟ್ ಸಹ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಜನರ ಭಾವನೆಗಳ ಜೊತೆ ಆಟವಾಡಲು ಸ್ವಾಮೀಜಿ ಯತ್ನಿಸುತ್ತಿದ್ದಾರೆಂದು ಹೇಳಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅನುಮಾನದ ಆಧಾರದಲ್ಲಿ ಸ್ವಾಮೀಜಿಯನ್ನು ನಿರ್ಬಂಧಿಸಲಾಗಿದ್ದು, ಯಾವುದೇ ಕಾರಣಗಳನ್ನು ಸರ್ಕಾರ ನೀಡಿಲ್ಲ. ಅರ್ಜಿದಾರ ಸ್ವಾಮೀಜಿಯು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ, ಸ್ವಾತಂತ್ರ್ಯದ ಎಲ್ಲೆಯನ್ನು ಮೀರುವುದಿಲ್ಲ ಎಂಬ ಅವರ ಪರ ವಕೀಲ ಮುಚ್ಚಳಿಕೆಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದ್ದು, ಅರ್ಜಿ ಪುರಸ್ಕರಿಸಲಾಗಿದೆ ಎಂದು ಆದೇಶಿಸಿದೆ.
ನವೆಂಬರ್ 5-7 ರಂದು ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕನ್ನೇರಿ ಶ್ರೀಗಳು ಪಾಲ್ಗೊಳ್ಳಬೇಕಿತ್ತು. ಆದರೆ ಲಿಂಗಾಯತ ಸಮುದಾಯಕ್ಕೆ ಅವ್ಯಾಚ್ಯವ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಈ ಮನವಿ ಪರಿಶೀಲಿಸಿದ ಕನೇರಿ ಸ್ವಾಮೀಜಿಗೆ ಧಾರವಾಡ ಜಿಲ್ಲೆಗೆ ಆಗಮಿಸಲು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ನೀಡಿದ್ದರು.
Advertisement