
ಬೆಂಗಳೂರು: ಲಿಂಗಾಯತ ಮಠಾಧೀಶರು ಹಾಗೂ ಬಸವ ಪರಂಪರೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಕನ್ನೇರಿ ಮಠದ ಕಾಡ ಸಿದ್ದೇಶ್ವರ ಸ್ವಾಮಿ ವಿರುದ್ಧ ಕಳೆದ 7-8 ದಿನಗಳಿಂದ ಪ್ರತಿಭಟನೆಗಳು ಭುಗಿಲೆದ್ದಿದ್ದು, ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಸಮಾರಂಭದಲ್ಲಿ ಮಾತನಾಡಿದ್ದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕಳೆದ ಎರಡು ತಿಗಂಗಳುಗಳಿಂದ ದೇವಾಲಯಕ್ಕೆ ಹೋಗಬೇಡಿ ಎಂದು ಪ್ರಚಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧೀಪತಿಗಳ ಒಕ್ಕೂಟದ ಕಲಾವಿದರು ಸೇರಿ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನ ರಾಜ್ಯಾದ್ಯಂತ ಮಾಡುತ್ತಿದ್ದಾರೆ.
ಗುಡಿಯಲ್ಲಿ ದೇವರಲಿಲ್ಲ. ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ ಎನ್ನುತ್ತಿದ್ದಾರೆ. ಇವರಿಗೆ ನಾನೇ ಬುದ್ಧಿ ಹೇಳಬೇಕು ಎಂದು ಕೆಲ ಅಸಂವಿಧಾನಿಕ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಿಂಗಾಯತ ಮಠಾಧೀಶರು ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಚಿವ ಎಂಬಿ,ಪಾಟೀಲ್ ಹಾಗೂ ಇತರೆ ಲಿಂಗಾಯತ ನಾಯಕರು ಕಾಡಸಿದ್ದೇಶ್ವರ ಸ್ವಾಮೀಜಿಗಳನ್ನು ಟೀಕಿಸಿದ್ದರೆ, ಇತರೆ ಸಚಿವರು ಮೌನ ತಾಳಿದ್ದಾರೆ.
ಕೆಲ ಲಿಂಗಾಯತ ನಾಯಕರು ಸ್ವಾಮೀಜಿಗಳ ಹೇಳಿಕೆ ಅಸಂವಿಧಾನಿಕ ಮತ್ತು ಬಸವಣ್ಣನವರ ಆದರ್ಶಗಳಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳ ಹೇಳಿಕೆ ವಿಜಯಪುರ, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು, ಬಾಗಲಕೋಟೆ ಮತ್ತು ಹುನಗುಂದದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿವೆ.
ಜಾಗತಿಕ ಲಿಂಗಾಯತ ಮಹಾಸಭಾ (ಜೆಎಲ್‌ಎಂ), ಬಸವ ಸಮಿತಿ ಮತ್ತು ಇತರೆ ಬಸವ ಸಂಘಟನೆಗಳು ಸ್ವಾಮಿಜಿಗಳ ಪ್ರತಿಕೃತಿಗಳನ್ನು ಸುಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಾದಸಿದ್ಧೇಶ್ವರ ಸ್ವಾಮಿ ಮಠಕ್ಕೆ ಕಳಂಕ ತಂದಿದ್ದಾರೆ. ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಜೆಎಲ್‌ಎಂ ಮಹಿಳಾ ವಿಭಾಗದ ಅಧ್ಯಕ್ಷೆ ನಾಗರತ್ನಾ ಭಾವಿಕಟ್ಟಿ ಹೇಳಿದ್ದಾರೆ.
ತಮ್ಮ ಹೇಳಿಕೆ ಕುರಿತು ಸ್ವಾಮೀಜಿ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತೇವೆಂದು ತಿಳಿಸಿದ್ದಾರೆ.
Advertisement