

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸರೇ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಡಿಜಿ ಹಾಗೂ ಐಜಿಪಿ ಸಲೀಂ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕಟ್ಟೆಚ್ಚರ ಸೂಚನೆ ಹೊರಡಿಸಿದ್ದಾರೆ.
ಪೊಲೀಸರೇ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗುತ್ತಿರುವುದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದಿರುವ ಅವರು, ಅಪರಾಧ ಕೃತ್ಯದಲ್ಲಿ ಶಾಮೀಲಾಗುವ ಅಧಿಕಾರಿ ಅಥವಾ ಸಿಬ್ಬಂದಿ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಞಾಪನಾ ಪತ್ರದ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ. ಅಲ್ಲದೆ, ಘಟಕಾಧಿಕಾರಿಗಳಿಗೆ ಹಲವು ಅಂಶಗಳ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಡಿಜಿ, ಐಜಿಪಿ ಸಲೀಂ ಪೊಲೀಸರಿಗೆ ನೀಡಿರುವ ಸೂಚನೆ
ಘಟಕದ ಎಲ್ಲಾ ಅಧಿಕಾರಿಗಳು ಅಧೀನದ ಪೊಲೀಸ್ ಸಿಬ್ಬಂದಿಯವರ ಮೇಲೆ ನಿಗಾ ವಹಿಸಬೇಕು.
ನೈತಿಕ ಮಾನದಂಡಗಳು, ಕಾನೂನುಬದ್ಧ ಕರ್ತವ್ಯಗಳು, ಮತ್ತು ಭ್ರಷ್ಟಾಚಾರ , ಅಪರಾಧಗಳ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು.
ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ದುರ್ವರ್ತನೆ, ಅಕ್ರಮ ಚಟುವಟಿಕೆಗಳು ಹಾಗೂ ಅಪರಾಧಿಕ ಕೃತ್ಯಗಳಲ್ಲಿ ತೊಡಗಿರುವ ಮಾಹಿತಿಗಳನ್ನು ತಕ್ಷಣವೇ ಪೊಲೀಸ್ ಪ್ರಧಾನ ಕಛೇರಿಗೆ ವರದಿ ಮಾಡಬೇಕು.
ಇಲಾಖೆಯ ಘನತೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಸಮಗ್ರತೆಯ ಸಂಸ್ಕೃತಿಯು ಅಧಿಕಾರಿ ಮತ್ತು ಸಿಬ್ಬಂದಿಗಳ ಸಮಾನ ಹೊಣೆಗಾರಿಕೆಯಾಗಿರುತ್ತದೆ.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಮನೋಬಲ ಕಗ್ಗುವಿಕೆಯನ್ನು ಮತ್ತು ಇತರ ನೈತಿಕ ಲೋಪದೋಷಗಳಿಗೆ ಕಾರಣವಾಗುವ ಅಂಶಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು.
ಪ್ರಸ್ತುತ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.
ಈ ನೀತಿ ಸಂಹಿತೆಯು ಅಡ್ಡದಾರಿಗಳಿಗೆ ಆಸ್ಪದವಾಗದಂತೆ ಕ್ರಮವಹಿಸಬೇಕು. ಇಲಾಖೆಯಲ್ಲಿ ದುರ್ನಡತೆಯನ್ನು ತಡೆಯುವ ಮೇಲ್ಕಂಡ ಎಲ್ಲಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಚನೆ.
ಅನುಷ್ಠಾನಗೊಳಿಸುವಲ್ಲಿ ವಿಫಲರಾಗುವ ಘಟಕಾಧಿಕಾರಿಗಳ ವಿರುದ್ಧ ಘೋರ ನಿರ್ಲಕ್ಷತೆ ಎಂದು ಪರಿಗಣನೆ ಮಾಡಲಾಗುತ್ತೆ.
ನಿರ್ಲಕ್ಷ್ಯತೆ ತೋರಿದರೆ ಇಲಾಖಾ ಶಿಸ್ತಿನ ಕ್ರಮಕ್ಕೆ ಗುರಿಪಡಿಸಲಾಗುವುದು. ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಗಳಲ್ಲಿನ ರಾಜಿ ಸಮಂಜಸವಲ್ಲ ಮತ್ತು ಸಹಿಸಲು ಸಾಧ್ಯವಿಲ್ಲ.
ಪೊಲೀಸ್ ಇಲಾಖೆಯ ಹಿರಿಮೆ ಮತ್ತು ಗೌರವಾದರಗಳನ್ನು ಹೆಚ್ಚಿಸುವ ಶಿಸ್ತುಬದ್ಧ, ಜವಾಬ್ದಾರಿಗಳು ಘಟಕಾಧಿಕಾರಿಗಳದ್ದಾಗಿರುತ್ತದೆ
ಇಲಾಖೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂಬುದನ್ನು ನಾವು ಮರೆಯಕೂಡದು ಎಂದು ಎಚ್ಚರಿಕೆ.
Advertisement