

ಬೆಂಗಳೂರು: ಇತ್ತೀಚೆಗೆ ನಾನು ನೀಡಿದ್ದ ಹೇಳಿಕೆಯಿಂದ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಹೇಳಿದರು.
ಮಂಡ್ಯದ ವಿಸಿ ಫಾರಂನಲ್ಲಿ ನಡೆಯುತ್ತರುವ ಕೃಷಿ ಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿಯವರು, ನಿರ್ಮಲಾನಂದನಾಥ ಸ್ವಾಮೀಜಿ ಅವರಷ್ಟು ವಿದ್ಯಾವಂತರಾದ ಮತ್ತೊಬ್ಬ ಸ್ವಾಮೀಜಿಗಳು ಇಲ್ಲ. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಶ್ರೀಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದಿದ್ದೆ. ನನ್ನ ಹೇಳಿಕೆಯಿಂದ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆಂದು ಹೇಳಿದರು.
ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜದ ಗೌರವ ಉಳಿಸಲಿಕ್ಕೆ ಬೀದಿಗೆ ಬಂದವರು. ಅವರಿಗೆ ದೇವೇಗೌಡರು ಮುಖ್ಯಮಂತ್ರಿಯಾಗಲಿ ಎನ್ನುವುದು ಮನಸ್ಸಿನಲ್ಲಿತ್ತು. ನನ್ನನ್ನು ಕಂಡರೂ ಅವರಿಗೆ ತುಂಬಾ ವಾತ್ಸಲ್ಯವಿತ್ತು. ನನ್ನಿಂದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಅಪಚಾರವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳು ಏನು ನಡೆಯುತ್ತಿವೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ನಮ್ಮ ನಿರ್ಮಲಾನಂದನಾಥ ಶ್ರೀಗಳು ಮಾತನಾಡಿದ್ದಾರೆ. ಅವರು ಮಾತಾಡಿದ್ದಕ್ಕೆ ಇನ್ಯಾರೋ ಮಾತಾಡಿದ್ದಾರೆ. ನಮ್ಮ ಸ್ವಾಮೀಜಿಯಷ್ಟು ಓದಿಕೊಂಡವರು, ಶಿಕ್ಷಣ ಪಡೆದವರು ಮತ್ತೊಬ್ಬರು ಇಲ್ಲ. ಸ್ವಾಮೀಜಿಗಳು ಅವರದ್ದೆ ಆದ ಕಲ್ಪನೆಗಳನ್ನು ಹೊಂದಿರುತ್ತಾರೆ. ಇಂತಹ ಸ್ವಾಮೀಜಿಗಳು ಇಲ್ಲಿಗೆ ಬರಬಾರದು. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದೆ. ನಮ್ಮ ಹಾಗೂ ದೊಡ್ಡ ಸ್ವಾಮೀಜಿಗಳ ಸಂಬಂಧ ಹಲವರಿಗೆ ಗೊತ್ತಿಲ್ಲ ಎಂದರು.
ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರು, ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು” ಎಂದು ಹೇಳಿದ್ದರು.
Advertisement