

ಬೀದರ್: ಭೀಕರ ಅಪಘಾತದಲ್ಲಿ 8 ವರ್ಷದ ಬಾಲಕಿ ತನ್ನದೇ ಶಾಲೆಯ ವಾಹನ ಹರಿದು ಸಾವನ್ನಪ್ಪಿರುವ ಭೀಕರ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜನವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕಿಯನ್ನು 8 ವರ್ಷದ ರುತ್ವಿ ಎಂದು ಗುರುತಿಸಲಾಗಿದೆ.
ಜನವಾಡದಲ್ಲಿರುವ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಬಾಲಕಿ ರುತ್ವಿ, ಇಂದು (ಡಿಸೆಂಬರ್ 09) ಶಾಲೆ ಮುಗಿಸಿಕೊಂಡು ಬಸ್ ಇಳಿದು ಮನೆಗೆ ಹೋಗುತ್ತಿದ್ದಾಗ ಅದೇ ಶಾಲಾ ಬಸ್ ಹರಿದು ಮೃತಪಟ್ಟಿದ್ದಾಳೆ.
ಗಡಿಕುಶನೂರು ಗ್ರಾಮದ ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ಚಾಲನೆ ಮಾಡಿದ್ದಾನೆ. ಈ ವೇಳೆ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ರುತ್ವಿ ಸಾವನ್ನಪ್ಪಿದ್ದಾಳೆ.
ಆಗಿದ್ದೇನು?
ಬಸ್ ಚಾಲಕ ಚಾಲಕ, ಗುರುನಾನಕ್ ಶಾಲೆಯಿಂದ ಮನೆಯ ವರೆಗೂ ಡ್ರಾಪ್ ಮಾಡಿದ್ದ. ಬಾಲಕಿ ಸ್ಕೂಲ್ ಬಸ್ ಇಳಿದು ಪಕ್ಕದಲ್ಲೇ ನಿಂತಿದೆ. ಇದನ್ನು ಗಮನಿಸಿದ ಚಾಲಕ ಹಾಗೇ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದು, ಅಲ್ಲೇ ನಿಂತಿದ್ದ ರುತ್ವಿ ಮೇಲೆ ಶಾಲಾ ಬಸ್ ನ ಹಿಂಬದಿ ಚಕ್ರ ಹರಿದಿದೆ.
ಈ ವೇಳೆ ಸ್ಥಳೀಯರು ಕೂಗಿಕೊಂಡಾಗ ಚಾಲಕ ಬಸ್ ನಿಲ್ಲಿಸಿದ್ದಾನೆ. ಕೆಳಗಿಳಿದು ನೋಡಿದಾಗ ಬಾಲಕಿ ರುತ್ವಿ ತೀವ್ರ ರಕ್ತಸ್ರಾವದಿಂದ ಬಿದ್ದಿದ್ದಳು.
ಕೂಡಲೇ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು, ಆದರೆ ಬಾಲಕಿ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ. ಇನ್ನು ಪೋಷಕರಿಗೆ ಈ ಮಾಹಿತಿ ತಿಳಿಯುತ್ತಲೇ ಅವರು ದೌಡಾಯಿಸಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಚಾಲಕನ ನಿರ್ಲಕ್ಷ್ಯವೇ ಪುಟ್ಟ ವಿದ್ಯಾರ್ಥಿನಿ ದಾರುಣ ಸಾವಿಗೆ ಕಾರಣ ಎಂದು ಹೇಳಲಾಗಿದ್ದು, ಸದ್ಯ ನಿರ್ಲಕ್ಷ್ಯ ಮಾಡಿದ ಚಾಲಕನ ವಿರುದ್ಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement