

ಬೆಂಗಳೂರು: ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ವಿದೇಶಕ್ಕೂ ರಫ್ತಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಸೋಮವಾರ ಜಟಾಪಟಿ ನಡೆದಿದೆ.
ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲ ಅಧಿವೇಶನ ಸೋಮವಾರ ಪ್ರಾರಂಭವಾಗಿದ್ದು, ವಿಧಾನಪರಿಷತ್ ಕಲಾಪದಲ್ಲಿ ಮೊದಲ ದಿನವೇ ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.
ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ವಿಚಾರವನ್ನು ಕಲಾಪದ ವೇಳೆ ಎಂಎಲ್ ಸಿ ಸಿ.ಟಿ ರವಿ ಅವರು ಪ್ರಸ್ತಾಪಿಸಿದರು.
ಬಡವರಿಗೆಂದು ಕೊಡಲ್ಪಡುವ ಅಕ್ಕಿ ಬಡವರ ಮನೆ ತಲುಪುತ್ತಿಲ್ಲ. ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟದ ಕುರಿತು ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ? ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಅನ್ನಭಾಗ್ಯ ಅಕ್ರಮ ಸಾಗಾಟದ ಆಳ-ಅಗಲ ಬಹಳಷ್ಟು ವಿಸ್ತಾರ ಆಗಿದೆ. ಇದರ ಸಮಗ್ರ ತನಿಖೆಗೆ ಎಸ್‌ಐಟಿ ತನಿಖೆಯ ಅಗತ್ಯ ಇದೆ ಎಂದು ಹೇಳಿದರು.
ಇದೇ ಅಕ್ಕಿಯನ್ನು ಪಾಲಿಶ್ ಮಾಡಿ 25 ಕೆ.ಜಿ.ಗೆ 8,000 ರೂಪಾಯಿಗೆ ಮಾರಾಟ ಮಾಡುತ್ತಾರಂತೆ. ದುಬೈನಲ್ಲಿ 10 ಕೆ.ಜಿ. ಅಕ್ಕಿಯನ್ನು 15,500 ರೂಪಾಯಿಗೆ ಮಾರಾಟ ಮಾಡುತ್ತರಂತೆ. ಅಂದರೆ, ಕೆ.ಜಿ.ಗೆ 150 ರೂಪಾಯಿ ಪಡೆಯುತ್ತಾರೆ. ಅನ್ನಭಾಗ್ಯ ಅಂತಾ ಕೊಡುತ್ತಿರುವ ಅಕ್ಕಿ ಬಡವರಿಗೆ ತಲುಪುತ್ತಿಲ್ಲ ಅಥವಾ ಬಡವರಿಗೆ ಬೇಕಾಗಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ನೀವೇ ಹೇಳಿದ್ದೀರಿ ಗೋದಾಮಿಗೆ ಬರುವುದಕ್ಕಿಂತ ಮುಂಚೆಯೇ ಕ್ವಿಂಟಾಲ್‌ಗಟ್ಟಲೇ ಅಕ್ಕಿ ಮಾಯವಾಗಿದೆ ಎಂದು ನೀವೇ ಉತ್ತರದಲ್ಲೇ ಕೊಟ್ಟಿದ್ದೀರಿ.
ನಾನು ಮಾಹಿತಿ ತೆಗೆದುಕೊಂಡಿರುವ ಪ್ರಕಾರ, ಒಂದೊಂದು ಜಿಲ್ಲೆಯಲ್ಲೇ 30-40 ಎಫ್‌ಐಆರ್ ದಾಖಲಾಗಿದೆ. ಇದರಿಂದಲೇ ಗೊತ್ತಾಗುತ್ತದೆ ಇದರ ಆಳ, ಅಗಲ ಎಷ್ಟಿದೆ ಎಂದು. ಬೇಲಿಯೇ ಎದ್ದು ಹೊಲ ಮೆಯ್ಯುತ್ತಿರುವುದು. ಆದ್ದರಿಂದ ಇದರ ಸಮಗ್ರ ತನಿಖೆಗೆ ಎಸ್‌ಐಟಿ ರಚನೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಒಂದು ಪ್ರಕರಣ ಆದರೆ, ಯಾರೋ ಒಬ್ಬ ಮೋಸ ಮಾಡಿದ್ದಾನೆ ಎಂದುಕೊಳ್ಳಬಹುದು. ಆದರೆ, ನೂರಾರು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ಈ ಕುರಿತು ಸಮಗ್ರ ತನಿಖೆ ಮಾಡುವ ಕೆಲಸವನ್ನು ಸರ್ಕಾರ ಮಾಡಿದ್ಯಾ? ಇದನ್ನು ನಿಯಂತ್ರಣ ಮಾಡುವುದೇಗೆ ಎಂದು ಸರ್ಕಾರ ಯೋಚನೆ ಮಾಡಿದ್ಯಾ? ಎಂದು ಪ್ರಶ್ನಿಸಿದರು.
ಈಗಾಗಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕೊಡುತ್ತಿರುವ ಪಡಿತರ ಕಳೆ ಗುಣಮಟ್ಟದಾಗಿದೆ. ರಾಗಿಯಲ್ಲಿ ಬರೀ ಮಣ್ಣು ತುಂಬಿರುತ್ತದೆ ಎಂದು ಈ ಹಿಂದೆ ಮಹಿಳೆಯೊಬ್ಬರು ವಿಡಿಯೋ ಸಹಿತ ಆರೋಪ ಮಾಡಿದ್ದರು. ಈಗಲೂ ಸಹ ಇಂತಹ ಆರೋಪಗಳು ಕೇಳಿಬರುತ್ತಿದ್ದು, ಸರ್ಕಾರ ಇದರತ್ತ ಗಮನಹರಿಸುವ ಮೂಲಕ ಬಡವರಿಗೆ ಗುಣಮಟ್ಟದ ಪಡಿತರ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆಉತ್ತರಿಸಿದ ಆಹಾರ ಸಚಿವ ಮುನಿಯಪ್ಪ, ಅಕ್ರಮವಾಗಿ ವಿದೇಶಕ್ಕೆ ಅಕ್ಕಿ ಮಾರಾಟ ಮಾಡಿದವರ ಬಗ್ಗೆ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಬಡವರಿಗೆ ಸೇರಬೇಕಾದ ಅಕ್ಕಿಯನ್ನು, ಅವರಿಗೇ ಸೇರುವಂತೆ ಮಾಡುತ್ತೇವೆ. ಕೃತ್ಯದಲ್ಲಿ ಶಾಮೀಲಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಹೀಗಾಗಿ, ಎಸ್ಐಟಿ ರಚಿಸುವ ಅಗತ್ಯವಿಲ್ಲ ಎಂದರು.
ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಇದುವರೆಗೂ ರಾಜ್ಯಾದ್ಯಂತ 485 ಪ್ರಕರಣಗಳನ್ನು ದಾಖಲಿಸಿ 570 ಮಂದಿಯನ್ನು ಬಂಧಿಸಲಾಗಿದೆ. ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 29,603.15 ಕ್ವಿಂಟಾಲ್ ಅಕ್ಕಿ ಹಾಗೂ 314 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗೆ ಕಾಲ ಕಾಲಕ್ಕೆ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿ, ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ವಿವರಿಸಿದರು.
ಯಾರಾದರೂ ಪಡಿತರ ಅಕ್ಕಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಕಂಡುಬಂದರೆ, ಅಂತವರ ಪಡಿತರ ಚೀಟಿಗಳನ್ನು ರದ್ದುಪಡಿಸಿ, ನಿಯಾಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ನ್ಯಾಯಬೆಲೆ ಅಂಗಡಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ ಪಡಿತರ ವಿತರಣೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಜನವರಿಯಿಂದಲೇ ʻಇಂದಿರಾ ಕಿಟ್ʼ ವಿತರಣೆ
ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹಕ್ಕೆ ಕಡಿವಾಣ ಹಾಕಲೆಂದೇ ‘ಇಂದಿರಾ ಆಹಾರ ಕಿಟ್’ ವಿತರಿಸಲಾಗುತ್ತಿದ್ದು ಬರುವ ಜನವರಿಯಿಂದ ಈ ಕಿಟ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
Advertisement