
ಬೆಂಗಳೂರು: ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಅಕ್ಕಿ ದುರ್ಬಳಕೆಯಾಗುತ್ತಿರುವುದನ್ನು ತಪ್ಪಿಸಲು, ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಸೇರಿದಂತೆ ಐದಾರು ಪದಾರ್ಥಗಳಿರುವ ಇಂದಿರಾ ಕಿಟ್ ವಿತರಿಸಲು ಸರ್ಕಾರ ಮುಂದಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಪ್ರತಿ ವರ್ಷ ಸುಮಾರು 360 ಕೋಟಿ ರೂ. ಮೌಲ್ಯದ ಸುಮಾರು 943 ಟನ್ ಆಹಾರ ವ್ಯರ್ಥವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.
ಹಸಿವಿನ ನೋವು, ಅಕ್ಕಿಯ ಮೌಲ್ಯ ನನಗೆ ತಿಳಿದಿದೆ, ಅದಕ್ಕಾಗಿಯೇ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ನಗರದಲ್ಲಿ ಆಹಾರ ವ್ಯರ್ಥ ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಧ್ಯಯನವು ರಾಜ್ಯ ರಾಜಧಾನಿಯಲ್ಲಿ ಮಾತ್ರ ಪ್ರತಿ ವರ್ಷ ಸುಮಾರು 360 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಿದೆ. ಪ್ರಜ್ಞಾಪೂರ್ವಕವಾಗಿ ಆಹಾರವನ್ನು ವ್ಯರ್ಥ ಮಾಡುವುದು ಆಹಾರದ ಮೇಲಿನ ದುರಹಂಕಾರವಾಗಿದೆ. ಮಹಾತ್ಮ ಗಾಂಧಿಯವರು ಆಹಾರ ವ್ಯರ್ಥ ಮಾಡುವುದನ್ನು ಪಾಪ ಎಂದು ಕರೆದಿದ್ದರು ಎಂದು ಹೇಳಿದರು.
ಇದೇ ವೇಳೆ ಅನ್ನ ಭಾಗ್ಯ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ನಿಲ್ಲಿಸಲು ಸರ್ಕಾರವು ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ದ್ವಿದಳ ಧಾನ್ಯಗಳು ಸೇರಿದಂತೆ ಪೌಷ್ಟಿಕ ಆಹಾರ ಕಿಟ್ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟಲು, ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಮತ್ತು ಇತರ ವಸ್ತುಗಳನ್ನು ಒಳಗೊಂಡಿರುವ ದಿನಸಿ ಕಿಟ್ ಅನ್ನು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕಿಟ್'ಗೆ ಇಂದಿರಾ ಕಿಟ್ ಎಂದು ಹೆಸರಿಸಲಾಗುವುದು ಎಂದರು.
Advertisement