

ಬೆಳಗಾವಿ: ಕರ್ನಾಟಕದಲ್ಲಿ ಟಿಪ್ಪು ಜಯಂತಿ ವಿವಾದ ಮತ್ತೆ ಭುಗಿಲೆದ್ದಿದ್ದು, ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್ ವಿಧಾನಸಭೆಯ ಕಲಾಪದಲ್ಲಿ ಟಿಪ್ಪು ಜಯಂತಿಯನ್ನು ಮತ್ತೆ ಆರಂಭಿಸುವಂತೆ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ.
ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಈ ಸಂಪ್ರದಾಯವನ್ನು ಪ್ರಾರಂಭಿಸಿದ್ದರು ಮತ್ತು ನಂತರ ಕೊಡಗಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸೇರಿದಂತೆ ವ್ಯಾಪಕ ಪ್ರತಿಭಟನೆಗಳ ನಂತರ ಅದಕ್ಕೆ ಬ್ರೇಕ್ ಹಾಕಿದ್ದರು.
ಈ ಪ್ರತಿಭಟನೆಯ ನಂತರ, ಟಿಪ್ಪುವಿನ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕ್ರಮೇಣ ಅದನ್ನು ಸ್ಥಗಿತಗೊಳಿಸಲಾಯಿತು.
ಈಗ ಹುನಗುಂದ ಶಾಸಕ ಕಾಶಪ್ಪನವರ್, ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕೆಂದು ಬಯಸಿದ್ದು, ವಿರೋಧ ಪಕ್ಷವಾದ ಬಿಜೆಪಿಯಿಂದ ಬಲವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ತೀವ್ರವಾಗಿ ಪ್ರತಿಭಟಿಸುವುದಾಗಿ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ್, ಟಿಪ್ಪು ಜಯಂತಿಯನ್ನು ಆಯೋಜಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದೇನೆ. ರಾಜ್ಯ ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯಬೇಕಾಗಿದೆ. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರೇ ಟಿಪ್ಪುವಿನ ವೇಷಭೂಷಣ ಧರಿಸಿ ಜಯಂತಿ ಆಚರಿಸಿದ್ದರು ಎಂದಿದ್ದಾರೆ.
ಅವರು ಅಗತ್ಯವಿದ್ದಾಗ ಅದನ್ನು ಆಚರಿಸಿದರು. ಈಗ ಅವರಿಗೆ ಅದು ಬೇಡ. ಆದರೆ, ನಾವು ಅದನ್ನು ನಡೆಸಬೇಕೆಂದು ಬಯಸುತ್ತೇವೆ. ಟಿಪ್ಪು ಕರ್ನಾಟಕದವನು, ಅವನು ತನ್ನ ಕುಟುಂಬ ಸೇರಿದಂತೆ ಈ ರಾಜ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದನು ಎಂದು ಕಾಂಗ್ರೆಸ್ ಶಾಸಕ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ, 'ಟಿಪ್ಪು ಜಯಂತಿ, ಒಸಾಮಾ ಬಿನ್ ಲಾಡೆನ್ ಜನ್ಮ ದಿನಾಚರಣೆ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಲಿ. ಇದು ಅವರ ಸರ್ಕಾರ. ಅವರು ಯಾರ ಪರವಾಗಿದ್ದಾರೆಂದು ಜನರಿಗೆ ತಿಳಿಯುತ್ತದೆ' ಎಂದು ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ವಕ್ಫ್ ಮತ್ತು ವಸತಿ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ಅವರು ಟಿಪ್ಪು ಜಯಂತಿಯನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.
'ದೇಶದಾದ್ಯಂತ ಟಿಪ್ಪು ಅನುಯಾಯಿಗಳು ಟಿಪ್ಪು ಜಯಂತಿಯನ್ನು ಆಯೋಜಿಸುತ್ತಿದ್ದಾರೆ. ನಾವು ಕೂಡ ಕಳೆದ ತಿಂಗಳು ಇದನ್ನು ಆಯೋಜಿಸಿದ್ದೇವೆ. ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇದನ್ನು ಆಯೋಜಿಸುತ್ತಿದ್ದರು. ಈಗ ಅದನ್ನು ನಿಲ್ಲಿಸಲಾಗಿದೆ. ಅದನ್ನು ನಿಲ್ಲಿಸಿದ ನಂತರ ನಾವು ಅದನ್ನು ಬೇರೆಡೆ ಆಯೋಜಿಸಬೇಕಲ್ಲವೇ?' ಎಂದು ಅವರು ಕೇಳಿದರು.
ಕೊಡಗಿನ ಒಂದು ವರ್ಗದ ಜನರು ಇದನ್ನು ವಿರೋಧಿಸಿದರು. ಟಿಪ್ಪು ಒಂದೇ ದಿನದಲ್ಲಿ 16,000 ಕೊಡವರನ್ನು ಕೊಂದಿದ್ದಾನೆ ಎಂದು ಆರೋಪಿಸಿದರು.
ಅದೇ ರೀತಿ, ಮಂಗಳೂರಿನ ಕೆಲವು ಕ್ರೈಸ್ತರು ಸಹ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದರು. ಮೈಸೂರು ಆಡಳಿತಗಾರ ತಮ್ಮ ಪೂರ್ವಜರಿಗೆ ಕ್ರೂರನಾಗಿದ್ದ ಎಂದು ಹೇಳಿದರು.
Advertisement